ರೈಲ್ವೆ ಪರೀಕ್ಷೆಯಲ್ಲಿ ಮಂಗಳಸೂತ್ರ, ಜನಿವಾರ ನಿಷೇಧ: ಇಲಾಖೆ ವಿರುದ್ಧ ವ್ಯಾಪಕ ಆಕ್ರೋಶ

123 2025 04 28t094320.803

ಕರ್ನಾಟಕದಲ್ಲಿ ಸಿಇಟಿ ಪರೀಕ್ಷೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳ ಜನಿವಾರ ತೆಗೆಯಲು ಒತ್ತಾಯಿಸಿದ ಘಟನೆ ರಾಜ್ಯಾದ್ಯಂತ ವಿವಾದಕ್ಕೆ ಕಾರಣವಾಗಿ, ಹೈಕೋರ್ಟ್‌ಗೆ ತಲುಪಿದೆ. ಈಗ ರೈಲ್ವೆ ನೇಮಕಾತಿ ಮಂಡಳಿಯ (RRB) ಹೊಸ ನಿಯಮವೊಂದು ತೀವ್ರ ಆಕ್ಷೇಪಕ್ಕೆ ಗುರಿಯಾಗಿದೆ. ಏಪ್ರಿಲ್ 29, 2025ರಂದು ನಡೆಯಲಿರುವ ನರ್ಸಿಂಗ್ ಸೂಪರಿಂಟೆಂಡೆಂಟ್ ಪರೀಕ್ಷೆಗೆ ಪ್ರವೇಶ ಪತ್ರಗಳನ್ನು ವಿತರಿಸಲಾಗಿದ್ದು, ಅದರಲ್ಲಿ ಮಂಗಳಸೂತ್ರ, ಜನಿವಾರ ಮತ್ತು ಇತರ ಧಾರ್ಮಿಕ ಸಂಕೇತಗಳನ್ನು ತೆಗೆದು ಪರೀಕ್ಷಾ ಕೇಂದ್ರಕ್ಕೆ ಬರಬೇಕೆಂದು ಸೂಚಿಸಲಾಗಿದೆ.

ಈ ಸೂಚನೆಗೆ ಹಿಂದೂ ಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಮಂಗಳೂರಿನ ಬೋಂದೆಲ್‌ನ ಮಣೇಲ್ ಶ್ರೀನಿವಾಸ್ ನಾಯಕ್ ಬೆಸೆಂಟ್ ವಿದ್ಯಾಕೇಂದ್ರದಲ್ಲಿ ನಡೆಯಲಿರುವ ಈ ಪರೀಕ್ಷೆಗೆ ಸಂಬಂಧಿಸಿದ ಪ್ರವೇಶ ಪತ್ರದಲ್ಲಿ ಈ ನಿಯಮವನ್ನು ಉಲ್ಲೇಖಿಸಲಾಗಿದೆ. ಜನಿವಾರ ಮತ್ತು ಮಂಗಳಸೂತ್ರ ಧರಿಸುವುದು ಹಿಂದೂ ಧಾರ್ಮಿಕ ಸಂಪ್ರದಾಯದ ಪ್ರಮುಖ ಭಾಗವಾಗಿದೆ. ಇವುಗಳನ್ನು ತೆಗೆಯಲು ಒತ್ತಾಯಿಸಿರುವುದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಕೃತ್ಯ ಎಂದು ಮುಖಂಡರು ಆರೋಪಿಸಿದ್ದಾರೆ.

ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪುವೆಲ್ ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. “ಏಪ್ರಿಲ್ 28, 29 ಮತ್ತು 30ರಂದು ಮಂಗಳೂರಿನ ಬೆಸೆಂಟ್ ವಿದ್ಯಾಕೇಂದ್ರದಲ್ಲಿ ನಡೆಯಲಿರುವ ರೈಲ್ವೆ ಇಲಾಖೆಯ ನರ್ಸಿಂಗ್ ಸೂಪರಿಂಟೆಂಡೆಂಟ್ ಪರೀಕ್ಷೆಗೆ ಹಾಜರಾಗುವವರು ತಮ್ಮ ಧಾರ್ಮಿಕ ಚಿಹ್ನೆಗಳಾದ ಮಂಗಳಸೂತ್ರ ಮತ್ತು ಜನಿವಾರ ತೆಗೆಯಬೇಕೆಂದು ಪ್ರವೇಶ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಇಂತಹ ಧರ್ಮವಿರೋಧಿ ಧೋರಣೆಯನ್ನು ಸಹಿಸಲು ಸಾಧ್ಯವಿಲ್ಲ,” ಎಂದು ಅವರು ಖಾರವಾಗಿ ಹೇಳಿದ್ದಾರೆ.

ಅವರು ಮುಂದುವರಿದು, “ಮಾನ್ಯ ಜಿಲ್ಲಾಧಿಕಾರಿಗಳು ಮತ್ತು ಸಂಸದರು ಈ ವಿಷಯಕ್ಕೆ ಗಮನಹರಿಸಿ, ಈ ನಿಯಮವನ್ನು ತಕ್ಷಣವೇ ಕೈಬಿಟ್ಟು, ಪರೀಕ್ಷಾರ್ಥಿಗಳ ಧಾರ್ಮಿಕ ಭಾವನೆಗೆ ಧಕ್ಕೆಯಾಗದಂತೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸುತ್ತೇನೆ,” ಎಂದು ಕೋರಿದ್ದಾರೆ.

ಈ ಹಿಂದೆ ಸಿಇಟಿ ಪರೀಕ್ಷೆಯಲ್ಲಿ ಜನಿವಾರ ತೆಗೆಯಲು ಒತ್ತಾಯಿಸಿದ ಘಟನೆ ರಾಜ್ಯದಾದ್ಯಂತ ಚರ್ಚೆಗೆ ಕಾರಣವಾಗಿತ್ತು. ಕಾಂಗ್ರೆಸ್ ಸರ್ಕಾರ ಹಿಂದೂ ಧಾರ್ಮಿಕ ಆಚರಣೆಗಳಿಗೆ ಧಕ್ಕೆ ತರುತ್ತಿದೆ ಎಂದು ಹಿಂದೂ ಪರ ಸಂಘಟನೆಗಳು ಆರೋಪಿಸಿದ್ದವು. ಇದೀಗ ರೈಲ್ವೆ ಇಲಾಖೆಯ ಮೇಲೂ ಇದೇ ರೀತಿಯ ಆರೋಪ ಕೇಳಿಬಂದಿದೆ. ಈ ವಿವಾದಕ್ಕೆ ರೈಲ್ವೆ ಇಲಾಖೆ ಯಾವ ರೀತಿಯ ಪ್ರತಿಕ್ರಿಯೆ ನೀಡುತ್ತದೆ ಅಥವಾ ಯಾವ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದುನೋಡಬೇಕಿದೆ.

Exit mobile version