ವೈಮನಸ್ಸು ಮರೆತು ಒಂದಾದ ಯಡಿಯೂರಪ್ಪ-ಈಶ್ವರಪ್ಪ: ಮದುವೆ ಸಮಾರಂಭದಲ್ಲಿ ಕಾಂತೇಶ್‌ಗೆ BSY ಆಶೀರ್ವಾದ

0 (28)

ಶಿವಮೊಗ್ಗ: ಬಿಜೆಪಿಯ ಹಿರಿಯ ನಾಯಕ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಮಾಜಿ ಸಚಿವ ಕೆಎಸ್ ಈಶ್ವರಪ್ಪ ಶಿವಮೊಗ್ಗದ ಶಿಕಾರಿಪುರದಲ್ಲಿ ನಡೆದ ಸಂಸದ ಬಿವೈ ರಾಘವೇಂದ್ರ ಅವರ ಪುತ್ರನ ವಿವಾಹ ಸಮಾರಂಭದಲ್ಲಿ ಮುಖಾಮುಖಿಯಾಗಿದ್ದಾರೆ. ಈ ಸಂದರ್ಭದಲ್ಲಿ ಈಶ್ವರಪ್ಪ ಅವರ ಪುತ್ರ ಕೆಇ ಕಾಂತೇಶ್, ಯಡಿಯೂರಪ್ಪನವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು.

ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಈಶ್ವರಪ್ಪ ಅವರ ಪುತ್ರ ಕಾಂತೇಶ್‌ಗೆ ಹಾವೇರಿ ಕ್ಷೇತ್ರದ ಬಿಜೆಪಿ ಟಿಕೆಟ್ ತಪ್ಪಿಸಿದ್ದಕ್ಕೆ ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ವಿರುದ್ಧ ಈಶ್ವರಪ್ಪ ಆರೋಪಿಸಿದ್ದರು. ಈ ಕಾರಣಕ್ಕೆ ಈಶ್ವರಪ್ಪ, ಶಿವಮೊಗ್ಗ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ರಾಘವೇಂದ್ರ ವಿರುದ್ಧ ಸ್ಪರ್ಧಿಸಿ ಸೋಲನುಭವಿಸಿದ್ದರು. ಈ ಘಟನೆಯಿಂದ ಬಿಜೆಪಿಯಿಂದ ಉಚ್ಚಾಟನೆಗೊಂಡ ಈಶ್ವರಪ್ಪ, ಯಡಿಯೂರಪ್ಪ ಕುಟುಂಬದ ವಿರುದ್ಧ ಸಾಕಷ್ಟು ಆಕ್ರೋಶ ವ್ಯಕ್ತಪಡಿಸಿದ್ದರು. ಈ ವಿವಾಹ ಸಮಾರಂಭ ಇಬ್ಬರ ನಡುವಿನ ವೈಮನಸ್ಸನ್ನು ಮರೆಸಿತು.

ರಾಘವೇಂದ್ರ ಅವರ ಪುತ್ರನ ಆರತಕ್ಷತೆ ಕಾರ್ಯಕ್ರಮದಲ್ಲಿ ಈಶ್ವರಪ್ಪ ಭಾಗವಹಿಸಿದರು. ಈ ವೇಳೆ ಯಡಿಯೂರಪ್ಪ, ಈಶ್ವರಪ್ಪ ಅವರ ಹೆಗಲ ಮೇಲೆ ಕೈಯಿಟ್ಟು ಸೌಹಾರ್ದಯುತವಾಗಿ ಮಾತನಾಡಿದರು. ಈಶ್ವರಪ್ಪರಿಗೆ ಶಾಲು ಹಾಕಿ ಧನ್ಯವಾದ ಸೂಚಿಸಿದ ಯಡಿಯೂರಪ್ಪ, ನವ ಜೋಡಿಗೆ ಶುಭ ಕೋರಿದರು. ಈಶ್ವರಪ್ಪ ಮತ್ತು ಕಾಂತೇಶ್ ಜೊತೆಗೆ ಯಡಿಯೂರಪ್ಪ ಮತ್ತು ವಿಜಯೇಂದ್ರ ಫೋಟೋಗೆ ಪೋಸ್ ಕೊಟ್ಟರು.

ಕಾಂತೇಶ್ ವೇದಿಕೆಯಲ್ಲಿ ಯಡಿಯೂರಪ್ಪನವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ವಿಜಯೇಂದ್ರರೊಂದಿಗೂ ಈಶ್ವರಪ್ಪ ಆತ್ಮೀಯವಾಗಿ ಮಾತನಾಡಿದರು. ವಿಜಯೇಂದ್ರರ ಬೆನ್ನು ತಟ್ಟಿ ಈಶ್ವರಪ್ಪ ಶುಭಾಶಯ ಕೋರಿದರು.

ಈ ಭೇಟಿಯು ಈಶ್ವರಪ್ಪ ಬಿಜೆಪಿಗೆ ಮರಳುವ ಸಾಧ್ಯತೆಯ ಬಗ್ಗೆ ಚರ್ಚೆಗೆ ಕಾರಣವಾಗಿದೆ. ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಪ್ರತಿಕ್ರಿಯೆಯಲ್ಲಿ, “ಇದು ಖಾಸಗಿ ಕಾರ್ಯಕ್ರಮವಾಗಿದ್ದು, ರಾಘವೇಂದ್ರರು ಈಶ್ವರಪ್ಪರಿಗೆ ಆಹ್ವಾನ ನೀಡಿದ್ದರು. ರಾಜಕೀಯವನ್ನು ಬದಿಗಿಟ್ಟು ಇಂತಹ ಸಂಬಂಧಗಳು ಮುಂದುವರಿಯಬೇಕು. ಈಶ್ವರಪ್ಪರನ್ನು ಪಕ್ಷಕ್ಕೆ ಮರಳಿ ಸೇರಿಸಿಕೊಳ್ಳುವ ಬಗ್ಗೆ ಬಿಜೆಪಿ ಹೈಕಮಾಂಡ್ ತೀರ್ಮಾನಿಸಬೇಕು” ಎಂದು ಹೇಳಿದರು.

ಈ ಭೇಟಿಯು ರಾಜಕೀಯವಾಗಿ ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವಿನ ಸಂಬಂಧ ಸುಧಾರಣೆಯ ಸಂಕೇತವೇ, ಅಥವಾ ಕೇವಲ ಒಂದು ಸೌಜನ್ಯ ಭೇಟಿಯೇ ಎಂಬುದನ್ನು ಕಾದು ನೋಡಬೇಕಿದೆ.

Exit mobile version