ಮಂಡ್ಯ: ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆಯ ವೇಳೆ ಕಲ್ಲು ತೂರಾಟದ ಘಟನೆಯಿಂದ ಉದ್ವಿಗ್ನಗೊಂಡ ವಾತಾವರಣ ಈಗ ಶಾಂತವಾಗಿದ್ದರೂ, ಬೂದಿಮುಚ್ಚಿದ ಕೆಂಡದಂತೆ ಉಳಿದಿದೆ. ಈ ಸಂದರ್ಭದಲ್ಲಿ ಬಿಜೆಪಿಯಿಂದ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮದ್ದೂರಿಗೆ ಭೇಟಿ ನೀಡಿದ್ದು, ಹಿಂದೂ ಕಾರ್ಯಕರ್ತರು ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ.
ರಾಮಮಂದಿರದ ಬಳಿ ಭಾಷಣ ಮಾಡಿದ ಯತ್ನಾಳ್, ಸಿದ್ದರಾಮಯ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಜೊತೆಗೆ, ‘ಕರ್ನಾಟಕ ಹಿಂದೂ ಪಾರ್ಟಿ’ ಎಂಬ ಹೊಸ ಪಕ್ಷದ ಸ್ಥಾಪನೆ ಮತ್ತು ಇದರ ಚಿಹ್ನೆಯಾಗಿ ‘JCB’ ಘೋಷಿಸಿ, ಬಿಜೆಪಿ ಹೈಕಮಾಂಡ್‌ಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿಗೆ ಖಡಕ್ ಸಂದೇಶ ಕೊಟ್ಟ ಯತ್ನಾಳ್
“ರಾಜ್ಯ ಬಿಜೆಪಿಯವರು ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ. ಹೊಂದಾಣಿಕೆ ರಾಜಕಾರಣಿಗಳನ್ನು ಕೈಬಿಡದಿದ್ದರೆ, ನಾನು ‘ಕರ್ನಾಟಕ ಹಿಂದೂ ಪಾರ್ಟಿ’ ಕಟ್ಟುತ್ತೇನೆ,” ಎಂದು ಯತ್ನಾಳ್ ಬಿಜೆಪಿ ಹೈಕಮಾಂಡ್‌ಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಜೊತೆಗೆ, ಮುಂದಿನ ದಿನಗಳಲ್ಲಿ ಮಂಡ್ಯ ಮತ್ತು ಮೈಸೂರಿಗೆ ಪ್ರವಾಸ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಹೊಸ ಪಕ್ಷ ಮತ್ತು ಚಿಹ್ನೆ ಘೋಷಣೆ
“ನಾವೆಲ್ಲರೂ ಹಿಂದೂಗಳ ಪರವಾಗಿ ಮಾತನಾಡುತ್ತೇವೆ. ಪ್ರತಾಪ್ ಸಿಂಹ ಜೊತೆಗೆ ಒಂದಾಗಿ ಹೊಸ ಸರ್ಕಾರ ತರುತ್ತೇವೆ. ಬಿಜೆಪಿಯವರು ನನ್ನನ್ನು ಗೌರವಯುತವಾಗಿ ಸ್ವೀಕರಿಸದಿದ್ದರೆ, ‘ಕರ್ನಾಟಕ ಹಿಂದೂ ಪಾರ್ಟಿ’ ಸ್ಥಾಪಿಸುತ್ತೇನೆ. ಈ ಪಕ್ಷದ ಗುರುತಾಗಿ JCB ಆಯ್ಕೆ ಮಾಡಿದ್ದೇನೆ,” ಎಂದು ಯತ್ನಾಳ್ ಘೋಷಿಸಿದ್ದಾರೆ.
ಮುಂದುವರೆದು, ಸಿದ್ದರಾಮಯ್ಯ ಸರ್ಕಾರವನ್ನು ‘ಔರಂಗಜೇಬ್ ಸರ್ಕಾರ’ ಎಂದು ಕರೆದು, “ಈ ಸರ್ಕಾರದಲ್ಲಿ ಸಾಬರಿಗೂ ಗುತ್ತಿಗೆಯಲ್ಲಿ ಮೀಸಲಾತಿ ಕೊಟ್ಟಿದ್ದಾರೆ. ವಕ್ಫ್‌ಗೆ ದೇಣಿಗೆ ಕೊಡುವ ಮುಸ್ಲಿಂ ಸರ್ಕಾರ ಬೇಕೇ? ಕರ್ನಾಟಕಕ್ಕೆ ಬುಲ್ಡೋಜರ್ ಬಾಬ ಬೇಕೇ?” ಎಂದು ಜನರನ್ನು ಕೇಳಿದ್ದಾರೆ. “ಮಸೀದಿಗಳ ಮುಂದೆ ಗಣೇಶ ಮೆರವಣಿಗೆಗೆ ಅವಕಾಶ ನೀಡದಿರುವುದು ತಪ್ಪು. ಇವರು ಕಟ್ಟಿರುವ ಮಸೀದಿಗಳು ಅಕ್ರಮ. ಇನ್ಮುಂದೆ ಕರ್ನಾಟಕದಲ್ಲಿ ಇಂತಹದ್ದು ನಡೆಯದು. ನನಗೆ ಜನರ ಆಶೀರ್ವಾದ ಸಿಕ್ಕರೆ, ರಾಜ್ಯಾದ್ಯಂತ ಅಕ್ರಮ ಮಸೀದಿಗಳನ್ನು ತೆರವುಗೊಳಿಸುತ್ತೇನೆ,” ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
2028ರ ಗುರಿ: ಸಿಎಂ ಆಗುವ ಕನಸು
ಯತ್ನಾಳ್ ತಮ್ಮ ಭಾಷಣವನ್ನು ಮುಂದುವರೆಸುತ್ತಾ, “ನಾನು ಅಧಿಕಾರಕ್ಕೆ ಬಂದರೆ, ಗೋಹತ್ಯೆ ಮಾಡುವವರನ್ನು ದಂಡಿಸುತ್ತೇನೆ. ವಕ್ಫ್ ಅನುದಾನವನ್ನು ಗೋರಕ್ಷಕರಿಗೆ ನೀಡುತ್ತೇನೆ. ದೇವಸ್ಥಾನದ ಹುಂಡಿ ಹಣವನ್ನು ದೇಗುಲದ ಅಭಿವೃದ್ಧಿಗೆ ಮಾತ್ರ ಬಳಸಬೇಕು. ಭಾರತದಲ್ಲಿರುವ ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಬೇಕು, ಪಾಕಿಸ್ತಾನದ ಹಿಂದೂಗಳನ್ನು ಭಾರತಕ್ಕೆ ಕರೆತರಬೇಕು. ಇದನ್ನು ಡಾ. ಅಂಬೇಡ್ಕರ್ ದೇಶ ವಿಭಜನೆ ಸಂದರ್ಭದಲ್ಲಿ ಹೇಳಿದ್ದರು. ಮದ್ದೂರಿನ ಘಟನೆಯನ್ನು ನೋಡಿದರೆ ಅಂಬೇಡ್ಕರ್ ಹೇಳಿದ್ದು ಸತ್ಯವೆನಿಸುತ್ತದೆ,” ಎಂದರು.
“ನಮ್ಮ ಸರ್ಕಾರ ಬಂದರೆ, ಮಸೀದಿಗಳ ಮುಂದೆ ಡ್ಯಾನ್ಸ್‌ಗೆ ಅವಕಾಶ ನೀಡುತ್ತೇನೆ. 2028ರಲ್ಲಿ ವಿಧಾನಸೌಧದ ಎದುರು ಎಲ್ಲರೂ ಭಗವಧ್ವಜ ಹಾರಿಸುತ್ತೀರಾ? ನನ್ನನ್ನು ಕರ್ನಾಟಕದ ಮುಖ್ಯಮಂತ್ರಿಯನ್ನಾಗಿ ಮಾಡಿ,” ಎಂದು ಯತ್ನಾಳ್ ಜನರಲ್ಲಿ ಮನವಿ ಮಾಡಿದ್ದಾರೆ.
