ಯಾದಗಿರಿ, (ಜುಲೈ 28): ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮವಾಗಿ ಕೃಷ್ಣಾ ನದಿಗೆ ನೀರಿನ ಹರಿವು ಹೆಚ್ಚಾಗಿದ್ದು, ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರದ ಬಸವಸಾಗರ ಡ್ಯಾಂ ಸಂಪೂರ್ಣ ಭರ್ತಿಯಾಗಿದೆ. ಜಲಾಶಯದ ನೀರಿನ ಮಟ್ಟ ಹೆಚ್ಚಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಸುರಕ್ಷತಾ ಕ್ರಮವಾಗಿ 22 ಗೇಟ್‌ಗಳನ್ನು ತೆರೆದು ಕೃಷ್ಣಾ ನದಿಗೆ 84 ಸಾವಿರ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡುತ್ತಿದ್ದಾರೆ.
ಪ್ರಸ್ತುತ ಬಸವಸಾಗರ ಜಲಾಶಯಕ್ಕೆ 50 ಸಾವಿರ ಕ್ಯೂಸೆಕ್ ನೀರಿನ ಒಳಹರಿವು ದಾಖಲಾಗುತ್ತಿದ್ದು, ನಿರಂತರವಾಗಿ ಹರಿವು ಹೆಚ್ಚುತ್ತಿರುವ ಕಾರಣ ಜಲಾಶಯದ ನೀರಿನ ಮಟ್ಟವನ್ನು ನಿಯಂತ್ರಿಸಲು ನೀರು ಹೊರಹಾಕುವ ಕಾರ್ಯ ಮುಂದುವರಿದಿದೆ. ಜಲಾಶಯದ ಒಟ್ಟು 33.33 ಟಿಎಂಸಿ ಸಂಗ್ರಹ ಸಾಮರ್ಥ್ಯ ಇದ್ದು, ಸದ್ಯ 32.65 ಟಿಎಂಸಿ ನೀರು ಸಂಗ್ರಹವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಳೆದ ಕೆಲವು ವಾರಗಳ ಹಿಂದಷ್ಟೇ ನೀರಿನ ಕೊರತೆಯಿಂದ ಬಸವಸಾಗರ ಡ್ಯಾಂನಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿದಿತ್ತು. ಆದರೆ ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಸುರಿದ ಭಾರೀ ಮಳೆಯ ಪರಿಣಾಮ ಕೇವಲ ಒಂದು ವಾರದ ಅವಧಿಯಲ್ಲೇ ಡ್ಯಾಂ ಸಂಪೂರ್ಣ ಭರ್ತಿಯಾಗಿರುವುದು ರೈತರಿಗೆ ನೆಮ್ಮದಿ ತಂದಿದೆ.
ಕೃಷ್ಣಾ ನದಿ ಪಾತ್ರದಲ್ಲಿರುವ ವಿಜಯಪುರ, ಯಾದಗಿರಿ, ರಾಯಚೂರು ಸೇರಿದಂತೆ ಹಲವು ಜಿಲ್ಲೆಗಳ ರೈತರು ಈ ಬೆಳವಣಿಗೆಯಿಂದ ಸಂತಸಗೊಂಡಿದ್ದಾರೆ. ಬಸವಸಾಗರ ಜಲಾಶಯ ಭರ್ತಿಯಾಗಿರುವುದರಿಂದ ಮುಂಬರುವ ನೀರಾವರಿ ಹಂಗಾಮಿಗೆ ಅಗತ್ಯ ನೀರಿನ ಲಭ್ಯತೆ ಖಚಿತವಾಗುವ ನಿರೀಕ್ಷೆ ವ್ಯಕ್ತವಾಗಿದೆ. ಅಲ್ಲದೆ, ಕುಡಿಯುವ ನೀರಿನ ಸಮಸ್ಯೆಯೂ ಬಹುತೇಕ ನಿವಾರಣೆಯಾಗಲಿದೆ ಎಂಬ ವಿಶ್ವಾಸ ಮೂಡಿದೆ.
ಇದೇ ವೇಳೆ, ನದಿಗೆ ಹೆಚ್ಚಿನ ಪ್ರಮಾಣದ ನೀರು ಹರಿಯುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣಾ ನದಿ ತೀರದ ಗ್ರಾಮಗಳ ನಿವಾಸಿಗಳು ಎಚ್ಚರಿಕೆ ವಹಿಸುವಂತೆ ಜಲಸಂಪನ್ಮೂಲ ಇಲಾಖೆ ಸೂಚಿಸಿದೆ. ನದಿಪಾತ್ರಕ್ಕೆ ಅನಗತ್ಯವಾಗಿ ಇಳಿಯಬಾರದು ಹಾಗೂ ಮೀನುಗಾರಿಕೆ ಸೇರಿದಂತೆ ಯಾವುದೇ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಬಸವಸಾಗರ ಡ್ಯಾಂ ಭರ್ತಿಯಾಗಿರುವುದು ಉತ್ತರ ಕರ್ನಾಟಕದ ಕೃಷಿ ವಲಯಕ್ಕೆ ಹೊಸ ಭರವಸೆ ಮೂಡಿಸಿದ್ದು, ಮಳೆ ಕೊರತೆಯಿಂದ ಆತಂಕದಲ್ಲಿದ್ದ ರೈತರ ಮುಖದಲ್ಲಿ ಇದೀಗ ಮಂದಹಾಸ ಮೂಡಿದೆ. ಉತ್ತಮ ಮಳೆಯೊಂದಿಗೆ ಜಲಾಶಯಗಳು ತುಂಬುತ್ತಿರುವುದು ಈ ವರ್ಷದ ಕೃಷಿ ಚಟುವಟಿಕೆಗಳಿಗೆ ಮತ್ತಷ್ಟು ಬಲ ನೀಡುವ ನಿರೀಕ್ಷೆಯಿದೆ.
