34 ವರ್ಷ ಮಠಕ್ಕೆ ಸೇವೆ ಸಲ್ಲಿಸಿದ್ದ ನೀಲಮ್ಮ ಅಶ್ವ ಇನ್ನಿಲ್ಲ..!

Untitled design (29)

ಯಾದಗಿರಿ (ಜುಲೈ 27): ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಐತಿಹಾಸಿಕ ಕೊಡೇಕಲ್ ಮಹಲಿನ ಮಠದ ಪಟ್ಟದ ಕುದುರೆ ‘ನೀಲಮ್ಮ’ ನಿಧನ ಹೊಂದಿದ್ದು, ಭಕ್ತರಲ್ಲಿ ತೀವ್ರ ದುಃಖದ ವಾತಾವರಣ ನಿರ್ಮಾಣವಾಗಿದೆ. ಕಳೆದ 34 ವರ್ಷಗಳಿಂದ ಮಠದ ಧಾರ್ಮಿಕ ಆಚರಣೆಗಳು, ಜಾತ್ರೆಗಳು ಹಾಗೂ ವಿವಿಧ ಸೇವಾ ಕಾರ್ಯಗಳಲ್ಲಿ ಪ್ರಮುಖ ಪಾತ್ರವಹಿಸಿದ್ದ ಈ ದೈವಿಕ ಅಶ್ವದ ಅಗಲಿಕೆ ಮಠದ ಭಕ್ತರಿಗೆ ಭಾವನಾತ್ಮಕ ಕ್ಷಣವಾಗಿ ಪರಿಣಮಿಸಿದೆ.

ಮಠದ ಧಾರ್ಮಿಕ ಸಂಪ್ರದಾಯದ ಅವಿಭಾಜ್ಯ ಅಂಗವಾಗಿದ್ದ ನೀಲಮ್ಮ ಕುದುರೆ, ಜಾತ್ರೆ ಹಾಗೂ ಧಾರ್ಮಿಕ ಮೆರವಣಿಗೆಗಳಲ್ಲಿ ಭಕ್ತರ ವಿಶೇಷ ಆಕರ್ಷಣೆಯಾಗಿತ್ತು. ನೀಲಮ್ಮನನ್ನು ದೈವಿಕ ಅಶ್ವವೆಂದು ಭಾವಿಸುತ್ತಿದ್ದ ಭಕ್ತರು ಅದರ ಸೇವೆಯನ್ನು ಅಪಾರ ಭಕ್ತಿಯಿಂದ ಸ್ಮರಿಸುತ್ತಿದ್ದರು.

ನಿಧನದ ಬಳಿಕ ನೀಲಮ್ಮಗೆ ವಿಶೇಷ ಅಲಂಕಾರ ಮಾಡಿ, ಹೂವಿನಿಂದ ಸಿಂಗರಿಸಿ ಸಂಪ್ರದಾಯ ಬದ್ಧವಾಗಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಯಿತು. ಬಳಿಕ ಮಹಲಿನಮಠದ ಪೀಠಾಧಿಪತಿ ಶ್ರೀ ವೃಷಭೇಂದ್ರ ಅಪ್ಪನವರ ನೇತೃತ್ವದಲ್ಲಿ ಧಾರ್ಮಿಕ ವಿಧಿ-ವಿಧಾನಗಳನ್ನು ನೆರವೇರಿಸಲಾಯಿತು.

ಕೊಡೇಕಲ್ ಗ್ರಾಮದಲ್ಲಿ ನಡೆದ ಅಂತಿಮಯಾತ್ರೆ ಭಕ್ತಿಭಾವದಿಂದ ಕೂಡಿತ್ತು. ಡೊಳ್ಳು ಕುಣಿತ, ಛಾಮರ, ಛತ್ರಿ ಸೇರಿದಂತೆ ಧಾರ್ಮಿಕ ಸಂಪ್ರದಾಯಗಳೊಂದಿಗೆ ನೀಲಮ್ಮಗೆ ಗೌರವಪೂರ್ವಕವಾಗಿ ಅಂತಿಮ ವಿದಾಯ ಸಲ್ಲಿಸಲಾಯಿತು. ಬಸವೇಶ್ವರ ದೇವಾಲಯದಿಂದ ನಿಜಲಿಂಗೇಶ್ವರ ಆವರಣದ ಮುಂಭಾಗದವರೆಗೆ ಅಂತಿಮಯಾತ್ರೆ ಸಾಗಿದ್ದು, ಸಾವಿರಾರು ಭಕ್ತರು ಭಾಗವಹಿಸಿ ಕಣ್ಣೀರಿನ ವಿದಾಯ ಹೇಳಿದರು.

ಬಸವ ಪರಂಪರೆಯ ವಿಧಿ-ವಿಧಾನಗಳಂತೆ ನೀಲಮ್ಮನ ಅಂತ್ಯಕ್ರಿಯೆ ನೆರವೇರಿಸಲಾಯಿತು. ಧಾರ್ಮಿಕ ಆಚರಣೆಗಳ ಬಳಿಕ ನೀಲಮ್ಮ ಪಂಚಭೂತಗಳಲ್ಲಿ ಲೀನವಾಗಿದ್ದು, ಮಠದ ಇತಿಹಾಸದಲ್ಲಿ ಒಂದು ಭಾವನಾತ್ಮಕ ಅಧ್ಯಾಯಕ್ಕೆ ತೆರೆ ಬಿದ್ದಂತಾಗಿದೆ.

34 ವರ್ಷಗಳ ಕಾಲ ಮಠದ ಸೇವೆಯಲ್ಲಿ ತನ್ನದೇ ಆದ ಸ್ಥಾನ ಪಡೆದಿದ್ದ ನೀಲಮ್ಮ ಕುದುರೆ, ಭಕ್ತರ ನೆನಪಿನಲ್ಲಿ ಸದಾ ಜೀವಂತವಾಗಿರಲಿದೆ ಎಂದು ಭಕ್ತರು ಭಾವುಕರಾಗಿ ಸ್ಮರಿಸಿದರು.

Exit mobile version