ನಾನು ಸಿಎಂ ಆದರೆ ಮೊದಲ ಕ್ಯಾಬಿನೆಟ್‌ನಲ್ಲೇ ಮುಸ್ಲಿಮರ ಅಲ್ಪಸಂಖ್ಯಾತ ಸ್ಥಾನಮಾನ ರದ್ದು ಮಾಡ್ತೇನೆ: ಶಾಸಕ ಯತ್ನಾಳ್

Untitled design (8)

ವಿಜಯಪುರ: ರಾಜ್ಯ ರಾಜಕಾರಣದಲ್ಲಿ ಸದಾ ತಮ್ಮ ಖಡಕ್ ಮತ್ತು ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಲ್ಲಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಇಂದು ಮತ್ತೊಂದು ಸಂಚಲನ ಮೂಡಿಸುವ ಹೇಳಿಕೆ ನೀಡಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಯತ್ನಾಳ್, ನಾನು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಮೊದಲ ಸಚಿವ ಸಂಪುಟ ಸಭೆಯಲ್ಲೇ ಮುಸ್ಲಿಮರನ್ನು ಅಲ್ಪಸಂಖ್ಯಾತ ಪಟ್ಟಿಯಿಂದ ಹೊರಹಾಕುತ್ತೇನೆ. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರು ನಡೆಸುತ್ತಿರುವ ಮಾದರಿಯಲ್ಲೇ ಕರ್ನಾಟಕದಲ್ಲೂ ಕಠಿಣ ಆಡಳಿತ ಜಾರಿಗೆ ತರುತ್ತೇನೆ ಎಂದು ಗುಡುಗಿದ್ದಾರೆ. ಮುಸ್ಲಿಮರ ಬದಲಿಗೆ ಮರಾಠರು, ಬ್ರಾಹ್ಮಣರು, ಕ್ಷತ್ರಿಯರು ಸೇರಿದಂತೆ ಅರ್ಹ ಸಮುದಾಯಗಳಿಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡುವುದಾಗಿ ಅವರು ತಿಳಿಸಿದ್ದಾರೆ.

ಪಕ್ಷದ ಹೈಕಮಾಂಡ್ ಮತ್ತು ನಾಯಕತ್ವದ ಬಗ್ಗೆ ಮಾತನಾಡಿದ ಅವರು, ನಾನು ಯಾವುದೇ ಕಾರಣಕ್ಕೂ ನನ್ನನ್ನು ಬಿಜೆಪಿಗೆ ಸೇರಿಸಿಕೊಳ್ಳಿ ಎಂದೂ ಯಾರ ಮುಂದೂ ಕೈಮುಗಿದು ನಿಲ್ಲುವುದಿಲ್ಲ. ಅವರಾಗಿಯೇ ಅಪ್ಪ-ಮಗನ (ಯಡಿಯೂರಪ್ಪ ಮತ್ತು ವಿಜಯೇಂದ್ರ) ಕೈಬಿಟ್ಟು ನನ್ನನ್ನು ಕರೆಯುವ ಕಾಲ ಬರಲಿದೆ. ನಾನು ಯಾವುದೇ ನಾಟಕವಾಡಿ ಪಕ್ಷದಲ್ಲಿ ಸ್ಥಾನ ಪಡೆಯುವ ಅವಶ್ಯಕತೆಯಿಲ್ಲ ಎಂದು ಪರೋಕ್ಷವಾಗಿ ಬಿ.ಎಸ್. ಯಡಿಯೂರಪ್ಪ ಕುಟುಂಬದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಎಂ.ಬಿ. ಪಾಟೀಲ್ ಅವರಿಗೆ ಟಾಂಗ್

ಸಚಿವ ಎಂ.ಬಿ. ಪಾಟೀಲ್ ಅವರ ವಿರುದ್ಧವೂ ವಾಗ್ದಾಳಿ ನಡೆಸಿದ ಯತ್ನಾಳ್, ಎಂ.ಬಿ. ಪಾಟೀಲ್ ಅವರು ಸ್ವಾಭಿಮಾನದ ಬಗ್ಗೆ ಮಾತನಾಡುತ್ತಾರೆ. ಅವರಿಗೆ ನಿಜವಾಗಿಯೂ ಸ್ವಾಭಿಮಾನವಿದ್ದರೆ ಬಾಗೇವಾಡಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡುವುದನ್ನು ನಿಲ್ಲಿಸಲಿ. ಏಕೆಂದರೆ ಅದೇ ಅಭ್ಯರ್ಥಿ ರಾತ್ರಿ ಹೊತ್ತು ಎಂ.ಬಿ. ಪಾಟೀಲ್ ವಿರುದ್ಧವೇ ಪ್ರಚಾರ ನಡೆಸುತ್ತಿದ್ದಾನೆ ಎಂದು ಲೇವಡಿ ಮಾಡಿದರು.

ಚರಂತಿಮಠ ಪರ ಪ್ರಚಾರ

ಮಾಜಿ ಶಾಸಕ ವೀರಣ್ಣ ಚರಂತಿಮಠ ತಮ್ಮ ಆತ್ಮೀಯ ಗೆಳೆಯರಾಗಿದ್ದು, ಬಾಗಲಕೋಟೆಯ ಬಿಜೆಪಿ ಕಾರ್ಯಕರ್ತರ ಆಹ್ವಾನದ ಮೇರೆಗೆ ಅವರ ಪರ ಪ್ರಚಾರಕ್ಕೆ ತೆರಳುತ್ತಿರುವುದಾಗಿ ಯತ್ನಾಳ್ ಸ್ಪಷ್ಟಪಡಿಸಿದರು. ಹನುಮ ಜಯಂತಿಯ ದಿನವೇ ಇಂತಹ ಕಠಿಣ ನಿರ್ಧಾರಗಳನ್ನು ಘೋಷಿಸಿರುವುದು ರಾಜ್ಯ ರಾಜಾಕಾರಣದಲ್ಲಿ ಸಂಚಲನ ಮೂಡಿಸಿದೆ.

Exit mobile version