ಮಂಗಳೂರು: ಸಾಮಾಜಿಕ ಹೋರಾಟಗಾರರಾಗಿ ಗುರುತಿಸಿಕೊಂಡಿರುವ ವಸಂತ್ ಗಿಳಿಯಾರ್ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕರ್ನಾಟಕ SYRO ಮಲಬಾರ್ ಕೆತೋಲಿಕ್ ಅಸೋಸಿಯೇಷನ್ ದೂರು ದಾಖಲಿಸಿದೆ.
ಗಿಳಿಯಾರ್ ಅವರು ಕ್ರೈಸ್ತ ಸಮುದಾಯದ ಬಗ್ಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸಿದ್ದಾರೆ ಮತ್ತು ಧಾರ್ಮಿಕ ಸಮುದಾಯಗಳ ನಡುವೆ ದ್ವೇಷವನ್ನು ಎತ್ತಿಕಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.
ವಸಂತ್ ಗಿಳಿಯಾರ್ ಅವರು ಫ್ರೀಡಂ ಪಾರ್ಕ್‌ನಲ್ಲಿ ನಡೆದ ಧರ್ಮ ಸಂರಕ್ಷಣಾ ಸಭೆಯಲ್ಲಿ ಭಾಷಣ ಮಾಡಿದ್ದರು. ಈ ವೇಳೆ, “ಧರ್ಮಸ್ಥಳದ ಬೆಳ್ತಂಗಡಿ ಭಾಗದಲ್ಲಿ ಕ್ರೈಸ್ತ ಮಿಷನರಿಗಳ ಪ್ರಭಾವ ಹೆಚ್ಚಾಗಿದೆ. ಮಿಷನರಿಗಳಿಂದಾಗಿ ಹಿಂದೂಗಳ ತುಳಸಿ ಕಟ್ಟೆ ಒಡೆಯಲಾಗಿದೆ ಮತ್ತು ಶಿಲುಬೆ ಇಡಲಾಗಿದೆ.
1983ರಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆರಂಭವಾದ ನಂತರ ಈ ಕೃತ್ಯಗಳು ನಿಂತಿವೆ. ಆಮಿಷಗಳಿಗೆ ಬಲಿಯಾಗದಂತೆ ಗ್ರಾಮಾಭಿವೃದ್ಧಿ ಯೋಜನೆ ನೋಡಿಕೊಂಡಿದೆ,” ಎಂದು ಹೇಳಿದ್ದಾರೆ.
ಈ ಹೇಳಿಕೆಯನ್ನು ಕರ್ನಾಟಕ SYRO ಮಲಬಾರ್ ಕೆತೋಲಿಕ್ ಅಸೋಸಿಯೇಷನ್ “ಕಟ್ಟುಕಥೆ” ಎಂದು ಆರೋಪಿಸಿದೆ. “ಗಿಳಿಯಾರ್ ಅವರ ಭಾಷಣವು ಸಾರ್ವಜನಿಕವಾಗಿ ಸುಳ್ಳು ಆರೋಪಗಳನ್ನು ಮಾಡಿದ್ದು, ದಂಗೆ ಏಳುವಂತೆ ಪ್ರೇರೇಪಿಸುವ ಉದ್ದೇಶವನ್ನು ಹೊಂದಿದೆ.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಗ್ಗೆ ನಮಗೆ ಉತ್ತಮ ಅಭಿಪ್ರಾಯವಿದೆ. ಆದರೆ, ಗಿಳಿಯಾರ್ ಅವರು ಸತ್ಯಕ್ಕೆ ವಿರುದ್ಧವಾಗಿ ಮಾತನಾಡಿದ್ದಾರೆ,” ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಆರೋಪಕ್ಕೆ ಸಂಬಂಧಿಸಿದಂತೆ ಯಾವುದೇ ಠಾಣೆಯಲ್ಲಿ ಇದುವರೆಗೆ ದೂರು ದಾಖಲಾಗಿಲ್ಲ ಎಂದು ಅಸೋಸಿಯೇಷನ್ ಸ್ಪಷ್ಟಪಡಿಸಿದೆ.
