ಕಾರವಾರ ಆ.30: ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕಾ ಬೋಟ್‌ವೊಂದು ಮುಳುಗಡೆಯಾಗಿದೆ ಈ ವೇಳೆ ಅದರಲ್ಲಿದ್ದ 24 ಮಂದಿ ಮೀನುಗಾರರನ್ನು ಸಮೀಪದಲ್ಲಿದ್ದ ಇತರೆ ಬೋಟ್‌ಗಳ ಸಿಬ್ಬಂದಿಗಳ ಸಮಯ ಪ್ರಜ್ಞೆಯಿಂದ ಸುರಕ್ಷಿತವಾಗಿ ರಕ್ಷಿಸಿರುವ ಘಟನೆ ಕಾರವಾರದ ಅಂಜದೀವ್ ದ್ವೀಪದ ಸಮೀಪ ನಡೆದಿದೆ.
ಬೆಳಂಬರ್ ಮೂಲದ ನೀಲಕಂಠ ಖಾರ್ವಿ ಅವರಿಗೆ ಸೇರಿದ ‘ಶ್ರೀ ಮಾತಾ’ ಹೆಸರಿನ ಮೀನುಗಾರಿಕಾ ಬೋಟ್ ಸಮುದ್ರದಲ್ಲಿ ಅವಘಡಕ್ಕೀಡಾಗಿ ಮುಳುಗಡೆಯಾಗಿದೆ. ಬೋಟ್ ಅಪಾಯದಲ್ಲಿರುವ ಮಾಹಿತಿ ತಿಳಿಯುತ್ತಿದ್ದಂತೆ ಸಮೀಪದಲ್ಲಿದ್ದ ಐದಾರು ಮೀನುಗಾರಿಕಾ ಬೋಟ್‌ಗಳ ಸಿಬ್ಬಂದಿ ತಕ್ಷಣವೇ ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ.
ಬೋಟ್‌ನಲ್ಲಿ ಸಿಲುಕಿದ್ದ 24 ಮಂದಿ ಮೀನುಗಾರರನ್ನು ಯಾವುದೇ ಪ್ರಾಣಾಪಾಯವಾಗದಂತೆ ಇತರೆ ಬೋಟ್‌ಗಳ ಸಿಬ್ಬಂದಿ ರಕ್ಷಿಸಿದ್ದಾರೆ. ಸಮಯಕ್ಕೆ ಸರಿಯಾಗಿ ನೆರವು ದೊರೆತ ಹಿನ್ನೆಲೆಯಲ್ಲಿ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.
ಮೀನುಗಾರಿಕಾ ಬೋಟ್ ಅನ್ನು ಮುಳುಗಡೆಯಿಂದ ರಕ್ಷಿಸಲು ಇತರೆ ಬೋಟ್‌ಗಳಿಗೆ ಹಗ್ಗ ಕಟ್ಟಿ ಎಳೆಯುವ ಪ್ರಯತ್ನ ಮಾಡಲಾಗಿದೆ. ಆದರೆ, ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗದೆ ‘ಶ್ರೀ ಮಾತಾ’ ಬೋಟ್ ಸಮುದ್ರದಲ್ಲಿ ಸಂಪೂರ್ಣವಾಗಿ ಮುಳುಗಡೆಯಾಗಿದೆ.
ಘಟನೆಯಿಂದ ಬೋಟ್ ಹಾಗೂ ಅದರಲ್ಲಿದ್ದ ಮೀನುಗಾರಿಕಾ ಪರಿಕರಗಳಿಗೆ ಭಾರೀ ಹಾನಿಯಾಗಿದ್ದು, ಸುಮಾರು 50 ಲಕ್ಷ ರೂ.ಗೂ ಅಧಿಕ ನಷ್ಟ ಸಂಭವಿಸಿರುವ ಅಂದಾಜಿದೆ. ಬೋಟ್ ಮುಳುಗಡೆಯಾದ ಹಿನ್ನೆಲೆಯಲ್ಲಿ ಮಾಲೀಕ ನೀಲಕಂಠ ಖಾರ್ವಿ ಅವರ ಕುಟುಂಬಕ್ಕೆ ದೊಡ್ಡ ಆರ್ಥಿಕ ಹೊಡೆತ ಉಂಟಾಗಿದೆ.
ನೀಲಕಂಠ ಖಾರ್ವಿ ಅವರಿಗೆ ಸೇರಿದ ಬೋಟ್‌ಗಳು ಈ ಹಿಂದೆಯೂ ಸಮುದ್ರದಲ್ಲಿ ಅವಘಡಕ್ಕೀಡಾಗಿ ಹಾನಿಗೊಳಗಾಗಿದ್ದವು ಎನ್ನಲಾಗಿದೆ. ಇದೀಗ ಮತ್ತೊಮ್ಮೆ ಅವರ ಬೋಟ್ ಮುಳುಗಡೆಯಾಗಿರುವುದು ಕುಟುಂಬದ ಆರ್ಥಿಕ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ.
ಘಟನೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಮೀನುಗಾರಿಕಾ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಸ್ಥಳೀಯ ಮೀನುಗಾರರು ಒತ್ತಾಯಿಸಿದ್ದಾರೆ. ಮೀನುಗಾರರ ಸುರಕ್ಷತೆಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಕೂಡ ಆಗ್ರಹಿಸಿದ್ದಾರೆ.
ಸದ್ಯ ಬೋಟ್ ಮುಳುಗಡೆಯ ನಿಖರ ಕಾರಣ ತಿಳಿದುಬಂದಿಲ್ಲ. ತಾಂತ್ರಿಕ ದೋಷ, ಸಮುದ್ರದ ಅಲೆಗಳ ಪ್ರಭಾವ ಅಥವಾ ಇತರ ಕಾರಣಗಳಿಂದ ಅವಘಡ ಸಂಭವಿಸಿದೆಯೇ ಎಂಬುದರ ಕುರಿತು ಮಾಹಿತಿ ಕಲೆಹಾಕಲಾಗುತ್ತಿದೆ.
