15 ತಿಂಗಳಲ್ಲಿ ತುಂಗಭದ್ರಾ ಜಲಾಶಯ ಗೇಟ್‌ ದುರಸ್ತಿ: ಸಚಿವ ಬೋಸರಾಜು

ಟಿಬಿ ಅಣೆಕಟ್ಟೆ ಗೇಟ್‌ ದುರಸ್ತಿಗೆ ₹165 ಕೋಟಿ!

1 (86)

ಬೆಂಗಳೂರು: ತುಂಗಭದ್ರಾ ಜಲಾಶಯದ 32 ಕ್ರಸ್ಟ್ ಗೇಟ್‌ಗಳ ದುರಸ್ತಿ ಮತ್ತು ಬದಲಾವಣೆಗೆ ಗುತ್ತಿಗೆ ಪಡೆದ ಕಂಪನಿಯು 15 ತಿಂಗಳ ಕಾಲಾವಧಿಯನ್ನು ಕೋರಿದ್ದು, ಈ ಅವಧಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರೂ ಆದ ಸಭಾನಾಯಕ ಎನ್.ಎಸ್. ಬೋಸರಾಜು ತಿಳಿಸಿದ್ದಾರೆ.

ವಿಧಾನ ಪರಿಷತ್ತಿನ ಶೂನ್ಯವೇಳೆಯಲ್ಲಿ ಬಿಜೆಪಿ ಸದಸ್ಯೆ ಹೇಮಲತಾ ನಾಯಕ್ ಅವರು ತುಂಗಭದ್ರಾ ಜಲಾಶಯದ 19ನೇ ಗೇಟ್ ಸೇರಿದಂತೆ 8 ಕ್ರಸ್ಟ್ ಗೇಟ್‌ಗಳ ದುರಸ್ತಿ ಕುರಿತು ಪ್ರಶ್ನೆ ಎತ್ತಿದ್ದಕ್ಕೆ ಉತ್ತರಿಸಿದ ಸಚಿವರು, ಈ ಕಾಮಗಾರಿಗೆ ತುಂಗಭದ್ರಾ ಜಲಾಶಯ ಮಂಡಳಿಯು ನಿರ್ಧಾರ ಕೈಗೊಳ್ಳಬೇಕಾಗಿದೆ ಎಂದು ಹೇಳಿದರು.

ಸಚಿವ ಬೋಸರಾಜು ಅವರು, ಗೇಟ್‌ ನಿರ್ಮಾಣಕ್ಕೆ ಈಗಾಗಲೇ ತುಂಗಭದ್ರಾ ಜಲಾಶಯ ಮಂಡಳಿಯಿಂದ ಅನುಮೋದನೆ ದೊರೆತಿದ್ದು, ಟೆಂಡರ್ ಪ್ರಕ್ರಿಯೆಯೂ ಪೂರ್ಣಗೊಂಡಿದೆ ಎಂದು ತಿಳಿಸಿದರು. ಈ ವರ್ಷದ ಮುಂಗಾರಿನ ಆರಂಭಕ್ಕೆ ಒಂದು ತಿಂಗಳ ಮೊದಲೇ ಜಲಾಶಯಕ್ಕೆ 64 ಟಿಎಂಸಿ ನೀರು ಹರಿದುಬಂದಿದ್ದರಿಂದ 19ನೇ ಗೇಟ್‌ನ ಶಾಶ್ವತ ದುರಸ್ತಿಯನ್ನು ಕೈಗೊಳ್ಳಲಾಗಲಿಲ್ಲ. ತಜ್ಞರ ಸಲಹೆಯಂತೆ ಎಲ್ಲ 32 ಗೇಟ್‌ಗಳನ್ನು ಬದಲಾಯಿಸಲು ನಿರ್ಧರಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ರಾಜಕೀಯ ಆರೋಪಗಳಿಗೆ ಪ್ರತಿಕ್ರಿಯೆ

ಕೊಡಗು ಜಿಲ್ಲೆಯ ಉಸ್ತುವಾರಿಯೂ ಆಗಿರುವ ಸಚಿವ ಬೋಸರಾಜು, ಕುಶಾಲನಗರ ತಾಲೂಕಿನ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಪ್ರತಿಪಕ್ಷಗಳು ಸರ್ಕಾರದ ಮೇಲೆ ವಿನಾಕಾರಣ ಆರೋಪ ಮಾಡುತ್ತಿವೆ ಎಂದು ಟೀಕಿಸಿದ ಅವರು, ಒಂದಿಬ್ಬರು ಶಾಸಕರ ಹೇಳಿಕೆಗಳನ್ನು ಆಧರಿಸಿ ಸುಳ್ಳು ಆರೋಪಗಳನ್ನು ಮಾಡಲಾಗುತ್ತಿದೆ ಎಂದರು.

ಸರ್ಕಾರದಲ್ಲಿ ಅನುದಾನ ಹಂಚಿಕೆ, ವಸತಿ ಯೋಜನೆಗಳು ಸೇರಿದಂತೆ ಎಲ್ಲಾ ಕಾರ್ಯಕ್ರಮಗಳು ಸುಗಮವಾಗಿ ನಡೆಯುತ್ತಿವೆ. ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್ ಅವರ ಆರೋಪಕ್ಕೆ ಸಂಬಂಧಿಸಿದಂತೆ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಮಸ್ಯೆ ಇದ್ದಿದ್ದು, ಮುಖ್ಯಮಂತ್ರಿಯವರು ಈಗಾಗಲೇ ಶಾಸಕರೊಂದಿಗೆ ಮಾತನಾಡಿ ಸಮಸ್ಯೆಯನ್ನು ಇತ್ಯರ್ಥಗೊಳಿಸಿದ್ದಾರೆ ಎಂದು ಸಚಿವ ಬೋಸುರಾಜು ತಿಳಿಸಿದರು.

ತುಂಗಭದ್ರಾ ಜಲಾಶಯದ ಗೇಟ್‌ ದುರಸ್ತಿ: ಸವಾಲುಗಳು

ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ 2024ರ ಆಗಸ್ಟ್ 10ರಂದು ಮುರಿದುಬಿದ್ದಿದ್ದು, ಇದರಿಂದ ಸುಮಾರು 36 ಟಿಎಂಸಿ ನೀರು ವ್ಯರ್ಥವಾಗಿತ್ತು. ತಾತ್ಕಾಲಿಕ ಸ್ಟಾಪ್‌ಲಾಗ್ ಗೇಟ್ ಅಳವಡಿಸಿ 75 ಟಿಎಂಸಿ ನೀರನ್ನು ಉಳಿಸಲಾಗಿತ್ತಾದರೂ, ಶಾಶ್ವತ ಗೇಟ್‌ನ ದುರಸ್ತಿಗೆ ಸಮಯ ತೆಗೆದುಕೊಂಡಿದೆ. ಒಟ್ಟು 33 ಗೇಟ್‌ಗಳ ಪೈಕಿ 11, 18, 20, 24, 27, ಮತ್ತು 28ನೇ ಗೇಟ್‌ಗಳು ಬಾಗಿರುವುದರಿಂದ ಕಾರ್ಯನಿರ್ವಹಿಸುತ್ತಿಲ್ಲ. ಈಗ ಎಲ್ಲಾ ಗೇಟ್‌ಗಳ ಬದಲಾವಣೆಗೆ ₹165 ಕೋಟಿ ವೆಚ್ಚದ ಯೋಜನೆಯನ್ನು ಕೇಂದ್ರದ ಡಿಆರ್‌ಐಪಿ ಯೋಜನೆಯಡಿ ಕೈಗೊಳ್ಳಲಾಗುತ್ತಿದೆ.

Exit mobile version