ಓಮಿನಿ ಕಾರು-ಬೈಕ್ ಡಿಕ್ಕಿ, ತಾಯಿ-ಮಗ ಸ್ಥಳದಲ್ಲೇ ಸಾ*ವು

Untitled design (94)

ತುಮಕೂರು,(ಜುಲೈ 16): ತುಮಕೂರು ಜಿಲ್ಲೆಯ ಹೊನ್ನುಡಿಕೆ ಸಮೀಪದ ಓಳಕಲ್ಲು–ಬಿಎಸ್ ಪಾಳ್ಯ ರಸ್ತೆಯಲ್ಲಿ ಇಂದು ಗುರುವಾರ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದ ತಾಯಿ ಮತ್ತು ಮಗ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಓಮಿನಿ ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯ ಪರಿಣಾಮ ಈ ದುರಂತ ಸಂಭವಿಸಿದೆ.

ಮೃತರನ್ನು ಬಿಎಸ್ ಪಾಳ್ಯ ಗ್ರಾಮದ ಕಮರ್ ಉನ್ನಿಸ್ (51) ಹಾಗೂ ಅವರ ಪುತ್ರ ಸೈಯದ್ ತಬ್ರೆಷ್ ಪಾಷಾ (27) ಎಂದು ಗುರುತಿಸಲಾಗಿದೆ. ಇಬ್ಬರೂ ತಮ್ಮ ಜಮೀನಿನ ಪೋತಿ ಖಾತೆ ಸಂಬಂಧಿತ ಕೆಲಸಕ್ಕಾಗಿ ಓಳಕಲ್ಲು ಗ್ರಾಮ ಪಂಚಾಯಿತಿ ಕಚೇರಿಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.

ಗ್ರಾಮ ಪಂಚಾಯಿತಿ ಕಚೇರಿಗೆ ವೇಳೆ ಎದುರಿನಿಂದ ಬಂದ ಓಮಿನಿ ಕಾರು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದ್ದು, ತಾಯಿ ಮತ್ತು ಮಗ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದ ತೀವ್ರತೆ ಸ್ಥಳದಲ್ಲಿದ್ದವರನ್ನು ಬೆಚ್ಚಿಬೀಳುವಂತೆ ಮಾಡಿತು.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಹೆಬ್ಬುರು ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ತುಮಕೂರು ಜಿಲ್ಲಾ ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ.

ಅಪಘಾತಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಓಮಿನಿ ಕಾರಿನ ಚಾಲಕನ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿತೇ ಅಥವಾ ಬೇರೆ ಕಾರಣಗಳಿವೆಯೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಈ ಸಂಬಂಧ ಹೆಬ್ಬುರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಈ ದುರಂತದಿಂದ ಬಿಎಸ್ ಪಾಳ್ಯ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದ್ದು, ಒಂದೇ ಕುಟುಂಬದ ಇಬ್ಬರು ಸದಸ್ಯರನ್ನು ಕಳೆದುಕೊಂಡಿರುವುದು ಅವರ ಕುಟುಂಬವನ್ನು ದುಃಖಕ್ಕೆ ದೂಡಿದೆ.

Exit mobile version