ಪಾವಗಡದಲ್ಲಿ ಘೋರ ದುರಂತ: ಗುಡಿಸಲಿಗೆ ಬೆಂಕಿ, ವೃದ್ಧೆ ಸಜೀವ ದಹನ!

Untitled design (79)

ತುಮಕೂರು ಸೆ. 11: ಆಕಸ್ಮಿಕವಾಗಿ ಗುಡಿಸಲಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ವೃದ್ಧೆಯೊಬ್ಬರು ಸ್ಥಳದಲ್ಲೇ  ಸಜೀವ ದಹನಗೊಂಡಿರುವ ದಾರುಣ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಕೆ.ಟಿ.ಹಳ್ಳಿ ಗ್ರಾಮದ ನವಗ್ರಾಮದಲ್ಲಿ ನಡೆದಿದೆ. ನಿನ್ನೆ ಗುರುವಾರ ಮಧ್ಯರಾತ್ರಿ ಈ ಭೀಕರ ಘಟನೆ ನಡೆದಿದ್ದು, ಮೃತರನ್ನು 65 ವರ್ಷದ ಸಣ್ಣಲಕ್ಷ್ಮಮ್ಮ ಎಂದು ಗುರುತಿಸಲಾಗಿದೆ.

ತೆಂಗಿನ ಗರಿಗಳಿಂದ ನಿರ್ಮಿಸಲಾಗಿದ್ದ ಗುಡಿಸಲು ಮನೆಗೆ ಮಧ್ಯರಾತ್ರಿ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ಕೆಲವೇ ಕ್ಷಣಗಳಲ್ಲಿ ಬೆಂಕಿ ಇಡೀ ಗುಡಿಸಲನ್ನು ಆವರಿಸಿಕೊಂಡಿದೆ. ಬೆಂಕಿಯ ತೀವ್ರತೆ ಹೆಚ್ಚಾದ ಹಿನ್ನೆಲೆಯಲ್ಲಿ ಮನೆಯೊಳಗಿದ್ದ ಸಣ್ಣಲಕ್ಷ್ಮಮ್ಮ ಅವರಿಗೆ ಹೊರಗೆ ಬರಲು ಸಾಧ್ಯವಾಗದೆ ಒಳಗಡೆಯೇ ಸಿಲುಕಿಕೊಂಡಿದ್ದಾರೆ. ಪರಿಣಾಮ ಬೆಂಕಿಗೆ ಸಿಲುಕಿ ಅವರು ಮೃತಪಟ್ಟಿದ್ದಾರೆ.

ಘಟನೆಯ ಬಗ್ಗೆ ಇಂದು ಶುಕ್ರವಾರ ಮುಂಜಾನೆ ಸುಮಾರು 2 ಗಂಟೆ ವೇಳೆಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ. ಮಾಹಿತಿ ದೊರೆಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಎಸ್‌ಐ ರಾಜೇಂದ್ರ, ಇನ್‌ಸ್ಪೆಕ್ಟರ್ ಕೊಟ್ರೇಶ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಘಟನೆಯ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ.

ನಂತರ ಡಿವೈಎಸ್ಪಿ ಮಂಜುನಾಥ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಂಕಿ ಹೇಗೆ ಹೊತ್ತಿಕೊಂಡಿತು ಎಂಬುದರ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಮೃತ ಸಣ್ಣಲಕ್ಷ್ಮಮ್ಮ ಅವರ ಪತಿ ಪರಸೆ ಕದರಪ್ಪ ಅವರು ಸುಮಾರು ಹತ್ತು ತಿಂಗಳ ಹಿಂದೆಯಷ್ಟೇ ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ. ಇದೀಗ ಸಣ್ಣಲಕ್ಷ್ಮಮ್ಮ ಕೂಡ ದುರಂತದಲ್ಲಿ ಮೃತಪಟ್ಟಿರುವುದು ಕುಟುಂಬಸ್ಥರು ಹಾಗೂ ಗ್ರಾಮಸ್ಥರಲ್ಲಿ ಆಘಾತ ಮೂಡಿಸಿದೆ.

ಇನ್ನು ಘಟನೆ ಕುರಿತು ಕುಟುಂಬಸ್ಥರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ ಬೆಂಕಿ ಅವಘಡಕ್ಕೆ ನಿಖರ ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಘಟನೆಗೆ ಸಂಬಂಧಿಸಿದ ಎಲ್ಲಾ ಆಯಾಮಗಳಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಘಟನಾ ಸ್ಥಳದಿಂದ ಅಗತ್ಯ ಮಾಹಿತಿ ಹಾಗೂ ಸಾಕ್ಷ್ಯಗಳನ್ನು ಸಂಗ್ರಹಿಸಿರುವ ಪೊಲೀಸರು, ಬೆಂಕಿ ಆಕಸ್ಮಿಕವಾಗಿ ಹೊತ್ತಿಕೊಂಡಿತೇ ಅಥವಾ ಇದರ ಹಿಂದೆ ಬೇರೆ ಯಾವುದಾದರೂ ಕಾರಣವಿದೆಯೇ ಎಂಬುದನ್ನು ಪತ್ತೆಹಚ್ಚಲು ಮುಂದಾಗಿದ್ದಾರೆ.

ಪಾವಗಡ ತಾಲೂಕಿನ ಅರಸೀಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ವೃದ್ಧೆಯ ಸಾವಿನ ಪ್ರಕರಣದ ಕುರಿತು ಪೊಲೀಸರ ತನಿಖೆ ಮುಂದುವರಿದಿದೆ.

Exit mobile version