ತುಮಕೂರು, ಆಗಸ್ಟ್ 31: ನೇಪಾಳದಲ್ಲಿ ಸಂಭವಿಸಿರುವ ರಣ ಭೀಕರ ಪ್ರವಾಹದ ನಡುವೆ ಕರ್ನಾಟಕದ ತುಮಕೂರು ಮೂಲದ ಇಬ್ಬರು ಯಾತ್ರಿಕರು ನಾಪತ್ತೆಯಾಗಿರುವ ಘಟನೆ ಆತಂಕ ಮೂಡಿಸಿದೆ. ಅಮೆರಿಕದಲ್ಲಿ ನೆಲೆಸಿರುವ ತುಮಕೂರು ಮೂಲದ ರಂಗುಸುಧೀರ್ (53) ಹಾಗೂ ಕೀರ್ತಿ ಆಚಾರ್ಯ (50) ಕಳೆದ ಐದು ದಿನಗಳಿಂದ ಕುಟುಂಬಸ್ಥರು ಹಾಗೂ ಸ್ನೇಹಿತರ ಸಂಪರ್ಕಕ್ಕೆ ಸಿಗದೆ ಇರುವುದಾಗಿ ತಿಳಿದುಬಂದಿದೆ.
ರಂಗುಸುಧೀರ್ ಮತ್ತು ಕೀರ್ತಿ ಆಚಾರ್ಯ ಇಬ್ಬರೂ ಬೆಂಗಳೂರು ಮೂಲದವರಾಗಿದ್ದು, ಸದ್ಯ ಅಮೆರಿಕದಲ್ಲಿ ವಾಸವಾಗಿದ್ದರು. ಸುಮಾರು 15 ವರ್ಷಗಳ ಹಿಂದೆಯೇ ಅವರು ಅಮೆರಿಕಕ್ಕೆ ಸ್ಥಳಾಂತರಗೊಂಡಿದ್ದರು. ಇಬ್ಬರೂ ಅಮೆರಿಕದ ಪೌರತ್ವ ಹೊಂದಿದ್ದಾರೆ ಎನ್ನಲಾಗಿದೆ.
10 ಮಂದಿಯ ತಂಡದೊಂದಿಗೆ ನೇಪಾಳ ಪ್ರವಾಸ
ರಂಗುಸುಧೀರ್ ಹಾಗೂ ಕೀರ್ತಿ ಆಚಾರ್ಯ ಸೇರಿದಂತೆ ಒಟ್ಟು 10 ಮಂದಿ ಅಮೆರಿಕದಿಂದ ನೇಪಾಳ ಪ್ರವಾಸಕ್ಕೆ ತೆರಳಿದ್ದರು. ಆಗಸ್ಟ್ 22 ರಂದು ಅಮೆರಿಕದಿಂದ ಪ್ರಯಾಣ ಆರಂಭಿಸಿದ್ದ ತಂಡ ನೇಪಾಳ ತಲುಪಿತ್ತು ಎನ್ನಲಾಗಿದೆ.
ಆದರೆ, ಆಗಸ್ಟ್ 26ರ ಬೆಳಗ್ಗೆ 8.29ರ ಸುಮಾರಿಗೆ ಗುರುಪ್ರಸಾದ್ ಎಂಬುವವರಿಗೆ ಕೊನೆಯ ಬಾರಿ ಕರೆ ಮಾಡಿದ್ದ ಇಬ್ಬರೂ ಆ ಬಳಿಕ ಸಂಪರ್ಕಕ್ಕೆ ಸಿಕ್ಕಿಲ್ಲ. ಕಳೆದ ಐದು ದಿನಗಳಿಂದ ಅವರ ಮೊಬೈಲ್ ಸಂಪರ್ಕ ಸಾಧ್ಯವಾಗದಿರುವುದು ಕುಟುಂಬಸ್ಥರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
ಇಬ್ಬರೂ ಭಾವ-ಭಾಮೈದುನರಾಗಿದ್ದು, ಕುಟುಂಬದೊಂದಿಗೆ ಹಲವು ವರ್ಷಗಳಿಂದ ಅಮೆರಿಕದಲ್ಲೇ ನೆಲೆಸಿದ್ದರು. ನೇಪಾಳ ಪ್ರವಾಸದ ವೇಳೆ ಪ್ರವಾಹ ಹಾಗೂ ಪ್ರತಿಕೂಲ ಪರಿಸ್ಥಿತಿಗೆ ಸಿಲುಕಿರುವ ಸಾಧ್ಯತೆ ಇದೆ ಎಂದು ಕುಟುಂಬಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಅಣ್ಣಂದಿರನ್ನು ಕಳೆದುಕೊಂಡು ಕಣ್ಣೀರಿಟ್ಟ ಸಹೋದರಿ
ತುಮಕೂರು ನಗರದ ಜಯನಗರದಲ್ಲಿರುವ ಕುಟುಂಬದ ಸಂಬಂಧಿಕರ ಮನೆಯಲ್ಲಿ ಇದೀಗ ಆತಂಕದ ವಾತಾವರಣ ನಿರ್ಮಾಣವಾಗಿದೆ. ರಂಗುಸುಧೀರ್ ಹಾಗೂ ಕೀರ್ತಿ ಆಚಾರ್ಯ ಅವರ ಸಹೋದರಿ ಇಬ್ಬರು ಅಣ್ಣಂದಿರ ಸಂಪರ್ಕ ಕಡಿತಗೊಂಡಿರುವುದರಿಂದ ಕಣ್ಣೀರಿನಲ್ಲಿ ದಿನ ಕಳೆಯುತ್ತಿದ್ದಾರೆ.
ನೇಪಾಳದಲ್ಲಿ ಉಂಟಾಗಿರುವ ಪ್ರವಾಹದ ಹಿನ್ನೆಲೆಯಲ್ಲಿ ಹಲವೆಡೆ ಸಂಪರ್ಕ ವ್ಯವಸ್ಥೆ ಹಾಗೂ ಸಂಚಾರಕ್ಕೆ ಅಡಚಣೆ ಉಂಟಾಗಿರುವುದರಿಂದ ಇಬ್ಬರ ಕುರಿತು ನಿಖರ ಮಾಹಿತಿ ಲಭ್ಯವಾಗಿಲ್ಲ ಎನ್ನಲಾಗಿದೆ.
ಕುಟುಂಬಸ್ಥರು ಇದೀಗ ಇಬ್ಬರ ಸುರಕ್ಷತೆಗಾಗಿ ಆತಂಕಗೊಂಡಿದ್ದು, ಸಂಬಂಧಪಟ್ಟ ಅಧಿಕಾರಿಗಳ ಮೂಲಕ ಅವರ ಪತ್ತೆಗೆ ಪ್ರಯತ್ನಿಸಲಾಗುತ್ತಿದೆ. ನೇಪಾಳದಲ್ಲಿರುವ ಭಾರತೀಯ ಅಧಿಕಾರಿಗಳು ಹಾಗೂ ಸ್ಥಳೀಯ ರಕ್ಷಣಾ ತಂಡಗಳ ನೆರವಿನಿಂದ ನಾಪತ್ತೆಯಾಗಿರುವವರ ಬಗ್ಗೆ ಮಾಹಿತಿ ಕಲೆಹಾಕುವ ಪ್ರಯತ್ನ ನಡೆಯುತ್ತಿದೆ.
ಬೆಂಗಳೂರು ಮೂಲದ ಈ ಇಬ್ಬರು ಅಮೆರಿಕದಲ್ಲಿ ಹಲವು ವರ್ಷಗಳಿಂದ ನೆಲೆಸಿದ್ದರೂ, ತಮ್ಮ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದರು. ಇದೀಗ ನೇಪಾಳ ಪ್ರವಾಸದ ವೇಳೆ ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ತುಮಕೂರು ಹಾಗೂ ಬೆಂಗಳೂರಿನಲ್ಲಿರುವ ಸಂಬಂಧಿಕರಲ್ಲಿ ಆತಂಕ ಮನೆ ಮಾಡಿದೆ.
