ತುಮಕೂರು: ಹೃದಯಾಘಾತದಿಂದ ತಮ್ಮ ಮಗನನ್ನು ಕಳೆದುಕೊಂಡ ತುಮಕೂರು ತಾಲೂಕಿನ ಹೆಬ್ಬಾಕ ಗ್ರಾಮದ ಒಬ್ಬ ತಂದೆ, ತಮ್ಮ ಪುತ್ರನ ಸ್ಮರಣಾರ್ಥವಾಗಿ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸುವ ಮೂಲಕ ಊರಿಗೇ ಮಾದರಿಯಾಗಿದ್ದಾರೆ. “ನಮ್ಮ ಮಗನಿಗೆ ಬಂದಂತಹ ದುರಂತ ಇನ್ನೊಬ್ಬರಿಗೆ ಬಾರದಿರಲಿ” ಎಂಬ ಆಶಯದೊಂದಿಗೆ ಈ ಶಿಬಿರವನ್ನು ಏರ್ಪಡಿಸಲಾಗಿದೆ.
ಕಳೆದ ಎರಡು ವಾರಗಳ ಹಿಂದೆ, ಹೆಬ್ಬಾಕ ಗ್ರಾಮದ ನೀಲಕಂಠಸ್ವಾಮಿ ಎಂಬ ಯುವಕ ಹೃದಯಾಘಾತದಿಂದ ಅಕಾಲಿಕವಾಗಿ ನಿಧನರಾದರು. ಈ ದುರಂತದಿಂದ ತೀವ್ರವಾಗಿ ನೊಂದಿದ್ದ ಅವರ ಪೋಷಕರು, ಗ್ರಾಮದ ಎಲ್ಲರಿಗೂ ಉಚಿತ ಆರೋಗ್ಯ ತಪಾಸಣೆಯನ್ನು ಒದಗಿಸಿದ್ದಾರೆ. ಶಾಲಾ ಮಕ್ಕಳು ಮತ್ತು ವೃದ್ಧರಿಗೆ ರಕ್ತದೊತ್ತಡ, ಮಧುಮೇಹ, ಮತ್ತು ಇಸಿಜಿ ಮೂಲಕ ಹೃದಯ ಆರೋಗ್ಯ ತಪಾಸಣೆಯನ್ನು ವೈದ್ಯರ ಮೂಲಕ ನಡೆಸಲಾಗಿದೆ.
ಶಿಬಿರದ ವೇಳೆ, 13 ವರ್ಷದ ಬಾಲಕ ಉದಯ್‌ಗೆ ಶಾಲೆಯಲ್ಲಿರುವಾಗ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣ ತಪಾಸಣೆ ನಡೆಸಿದ ವೈದ್ಯರು ಯಾವುದೇ ಗಂಭೀರ ಸಮಸ್ಯೆ ಇಲ್ಲ ಎಂದು ದೃಢಪಡಿಸಿದ್ದು, ಬಾಲಕನ ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ. ನೀಲಕಂಠಸ್ವಾಮಿಯವರ ಪೋಷಕರ ಈ ಸಾಮಾಜಿಕ ಕಾರ್ಯಕ್ಕೆ ಗ್ರಾಮಸ್ಥರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.