ತುಮಕೂರು: ತಿಪಟೂರು ತಾಲ್ಲೂಕಿನ ಅಯ್ಯನಬಾವಿ ಭೋವಿ ಕಾಲೋನಿಯಲ್ಲಿ ಘೋರ ದುರಂತವೊಂದು ಸಂಭವಿಸಿದೆ. ಬೀದಿ ನಾಯಿಗಳ ದಾಳಿಗೆ ಒಳಗಾಗಿ 6 ವರ್ಷದ ಬಾಲಕಿ ನವ್ಯಾ ದಾರುಣವಾಗಿ ಮೃತಪಟ್ಟಿದ್ದಾಳೆ.
ನವ್ಯಾ ತನ್ನ ತಂದೆ ಮಹಲಿಂಗಯ್ಯನವರ ಜೊತೆಗೆ ನಿನ್ನೆ ಸಂಜೆ 5 ಗಂಟೆಗೆ ತೋಟಕ್ಕೆ ಹೋಗುತ್ತಿದ್ದಳು. ತಂದೆಯ ಹಿಂದೆ ನಡೆಯುತ್ತಿದ್ದ ಬಾಲಕಿಯ ಮೇಲೆ ಬೀದಿ ನಾಯಿಗಳು ದಾಳಿ ಮಾಡಿವೆ. ಬಾಲಕಿಯ ಮುಖ, ಕೈ, ಕಾಲು, ತೊಡೆ ಮತ್ತು ಹೊಟ್ಟೆ ಭಾಗವನ್ನು ಶ್ವಾನಗಳು ಕಿತ್ತು ಎಳೆದಾಡಿವೆ. ನವ್ಯಾ ಚೀರಾಡಿದರೂ, ಕಿವುಡಿರುವ ತಂದೆಗೆ ಮಗಳ ಕೂಗು ಕೇಳಿಸಲಿಲ್ಲ.
ಸ್ಥಳೀಯರು ಧಾವಿಸಿ ಬಂದು ಮಹಲಿಂಗಯ್ಯನವರನ್ನು ಎಚ್ಚರಿಸಿದಾಗ, ರಕ್ತದ ಮಡುವಿನಲ್ಲಿ ಬಾಲಕಿಯ ದಯನೀಯ ಸ್ಥಿತಿ ಅವರಿಗೆ ಗೊತ್ತಾಯಿತು. ಕೂಡಲೇ ಸ್ಥಳೀಯರು ನವ್ಯಾಳನ್ನು ಆಸ್ಪತ್ರೆಗೆ ಸಾಗಿಸಿದರೂ, ತುಮಕೂರಿನಿಂದ ಹಾಸನದ ಸರ್ಕಾರಿ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಬಾಲಕಿ ಪ್ರಾಣ ಬಿಟ್ಟಳು.
ನವ್ಯಾಳ ತಂದೆ ಮಹಲಿಂಗಯ್ಯನವರಿಗೆ ಕಾಲು ಮುರಿದಿದ್ದು, ಕಿವಿಯ ಕೇಳಿಕೆಯ ಸಮಸ್ಯೆಯಿದೆ. ತಾಯಿ ಭಾಗ್ಯಮ್ಮನವರಿಗೂ ಕಿವಿಯ ಸಮಸ್ಯೆ ಇದೆ. ಈ ಬಡ ಕುಟುಂಬಕ್ಕೆ ಏಕೈಕ ಆಸರೆಯಾಗಿದ್ದ ಮಗಳನ್ನು ಬೀದಿ ನಾಯಿಗಳು ಕಸಿದುಕೊಂಡಿವೆ. ಬಾಲಕಿಯ ದುರಂತ ಸಾವಿಗೆ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಹೃದಯಾಘಾತಕ್ಕೆ ಹೊಸಪೇಟೆಯ ಪೊಲೀಸ್ ಪೇದೆ ದಾದಾಸಾಹೇಬ್ ನಿಧನ
ಬಳ್ಳಾರಿ: ವಿಜಯನಗರ ಜಿಲ್ಲೆಯ ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯ ಮುಖ್ಯ ಪೇದೆಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೃತ ವ್ಯಕ್ತಿ ಬಳ್ಳಾರಿ ತಾಲೂಕಿನ ಹಲಕುಂದಿ ಗ್ರಾಮದ ಆರ್. ದಾದಾಸಾಹೇಬ್ (51).
ದಾದಾಸಾಹೇಬ್ ಅವರು ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮುಖ್ಯ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕಳೆದ 26 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದ ಅವರು, ಮೇ 24, 2025 ರ ಶನಿವಾರ ಬೆಳಗ್ಗೆ ಹೃದಯಾಘಾತದಿಂದ ಕೊನೆಯುಸಿರೆಳೆದರು.
ಮೃತ ದಾದಾಸಾಹೇಬ್ ಅವರಿಗೆ ಪತ್ನಿ, ಒಬ್ಬ ಪುತ್ರ ಮತ್ತು ಒಬ್ಬ ಪುತ್ರಿ ಇದ್ದಾರೆ. ಅವರ ನಿಧನಕ್ಕೆ ಹೊಸಪೇಟೆಯ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಬಳಿ ಪೊಲೀಸ್ ಸಿಬ್ಬಂದಿ ಕಂಬನಿ ಮಿಡಿದಿದ್ದಾರೆ.