ಮಂಡ್ಯ: ಶ್ರೀರಂಗಪಟ್ಟಣದ ಒಬೆಲಿಸ್ಕ್ ಸ್ತಂಭದ ಬಳಿ ಕಾವೇರಿ ನದಿಯ ನಡುಗಡ್ಡೆಯಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ಶ್ರೀರಂಗಪಟ್ಟಣ ಅಗ್ನಿಶಾಮಕ ದಳದ ಸಿಬ್ಬಂದಿ ಯಶಸ್ವಿಯಾಗಿ ರಕ್ಷಿಸಿದ ಘಟನೆ ಸೋಮವಾರ (ಆಗಸ್ಟ್ 18) ನಡೆದಿದೆ. ಮಹಾರಾಷ್ಟ್ರದ ಮೂಲದ ಲಕ್ಷ್ಮಣ್ ಸಹಾನಿ ಎಂಬ ವ್ಯಕ್ತಿ ಪ್ರವಾಹದಲ್ಲಿ ಸಿಲುಕಿದ್ದು, ಅಗ್ನಿಶಾಮಕ ದಳದ ಸಾಹಸಮಯ ಕಾರ್ಯಾಚರಣೆಯಿಂದ ಈತನ ಜೀವ ಉಳಿಸಲಾಗಿದೆ.
ಲಕ್ಷ್ಮಣ್ ಸಹಾನಿ ಕಬ್ಬು ಕಡಿಯಲು ಮಂಡ್ಯಕ್ಕೆ ಬಂದಿದ್ದು, ಕಾವೇರಿ ನದಿಯಲ್ಲಿ ಸ್ನಾನಕ್ಕೆ ಇಳಿದಾಗ ನೀರಿನ ಹರಿವು ಇದ್ದಕ್ಕಿದ್ದಂತೆ ಹೆಚ್ಚಾಗಿದೆ. ಇದರಿಂದ ದಡಕ್ಕೆ ವಾಪಸ್ ಬರಲಾಗದೆ ನಡುಗಡ್ಡೆಯಲ್ಲಿ ಸಿಲುಕಿದ್ದರು. ಸ್ಥಳೀಯರು ತಕ್ಷಣ ಶ್ರೀರಂಗಪಟ್ಟಣ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದು, ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು.
ಶ್ರೀರಂಗಪಟ್ಟಣ ಅಗ್ನಿಶಾಮಕ ಠಾಣಾಧಿಕಾರಿ ಅಂಬರೀಷ್ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಪರಮೇಶ್, ಚಂದ್ರಶೇಖರ್, ವಿಶ್ವಾಸ್ ಮತ್ತು ನೂರ್ ಜಾನ್ ಭಾಗವಹಿಸಿದ್ದರು. 1 ಲಕ್ಷ ಕ್ಯೂಸೆಕ್‌ಗಿಂತಲೂ ಹೆಚ್ಚಿನ ನೀರಿನ ಹರಿವಿನ ನಡುವೆಯೂ ಅಗ್ನಿಶಾಮಕ ದಳದ ಸಿಬ್ಬಂದಿ ತಮ್ಮ ಸಾಹಸದಿಂದ ಲಕ್ಷ್ಮಣ್ ಅವರನ್ನು ರಕ್ಷಿಸಿ, ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ.