ದಕ್ಷಿಣಕನ್ನಡ: ಮಂಗಳೂರಿನ ಧರ್ಮಸ್ಥಳ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ವಿಚಾರಣೆ ಎದುರಿಸಿದ ಉದಯ್ ಕುಮಾರ್ ಜೈನ್, ತಮ್ಮ ಮೇಲಿನ ಆರೋಪಗಳಿಂದ ಕಳಂಕಮುಕ್ತರಾಗಲು ರಾಷ್ಟ್ರಪತಿಗಳಿಗೆ ದಯಾಮರಣಕ್ಕಾಗಿ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ, “ಸೌಜನ್ಯ ಪ್ರಕರಣದಲ್ಲಿ ನನ್ನ ಹೆಸರನ್ನು ಉದ್ದೇಶಪೂರ್ವಕವಾಗಿ ಸೇರಿಸಲಾಗಿದೆ. ಕಳೆದ 13 ವರ್ಷಗಳಿಂದ ನನ್ನ ಹೆಸರನ್ನು ಸುಖಾಸುಮ್ಮನೆ ಈ ಪ್ರಕರಣಕ್ಕೆ ಎಳೆದು ತಂದಿದ್ದು, ಸಮಾಜದಲ್ಲಿ ನನ್ನನ್ನು ಅನುಮಾನದ ದೃಷ್ಟಿಯಿಂದ ನೋಡುವಂತಾಗಿದೆ,” ಎಂದು ಜೈನ್ ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಬೆಳ್ತಂಗಡಿ ಪೊಲೀಸರು ಸಂತೋಷ್ ರಾವ್‌ನನ್ನು ಆರೋಪಿಯಾಗಿ ಗುರುತಿಸಿ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಸಿಐಡಿ ಮತ್ತು ಸಿಬಿಐ ತನಿಖೆಯಲ್ಲಿ ಉದಯ್ ಜೈನ್ ವಿರುದ್ಧ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ. ತಮ್ಮ ನಿರ್ದೋಷತೆಯನ್ನು ಸಾಬೀತುಪಡಿಸಲು ಜೈನ್ ಮಂಪರು (ನಾರ್ಕೋ ಅನಾಲಿಸಿಸ್) ಪರೀಕ್ಷೆಗೂ ಒಳಗಾಗಿದ್ದಾರೆ. “ನನಗೆ ನ್ಯಾಯ ಕೊಡಿ ಅಥವಾ ದಯಾಮರಣ ನೀಡಿ,” ಎಂದು ಜೈನ್ ರಾಷ್ಟ್ರಪತಿಗಳಿಗೆ ಮನವಿ ಮಾಡಿದ್ದಾರೆ.
ವಿಶೇಷ ತನಿಖಾ ತಂಡ (ಎಸ್‌ಐಟಿ) ಜೈನ್‌ಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ನಡೆಸಿತ್ತು. ಈ ನೋಟಿಸ್‌ನ ಹಿನ್ನೆಲೆಯಲ್ಲಿ ಜೈನ್ ಎಸ್‌ಐಟಿ ವಿಚಾರಣೆಗೆ ಹಾಜರಾಗಿದ್ದರು. ಆದರೂ, ಸಿಐಡಿ ಮತ್ತು ಸಿಬಿಐ ತನಿಖೆಯಲ್ಲಿ ಕಳಂಕಮುಕ್ತರಾಗಿದ್ದರೂ, ಈ ಪ್ರಕರಣದಿಂದ ತಮ್ಮ ಗೌರವಕ್ಕೆ ಧಕ್ಕೆಯಾಗಿದೆ ಎಂದು ಜೈನ್ ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ.