ಬೆಳ್ತಂಗಡಿ: ಧರ್ಮಸ್ಥಳದ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಬೆಳವಣಿಗೆಯೊಂದು ಮುನ್ನಲೆಗೆ ಬಂದಿದೆ. ಬುರುಡೆ ಮ್ಯಾನ್ ಚಿನ್ನಯ್ಯ ತಾನು ಸೌಜನ್ಯಳ ಅಪಹರಣವನ್ನು ಕಣ್ಣಾರೆ ಕಂಡಿದ್ದೇನೆ ಎಂದು ಹೇಳಿಕೆ ನೀಡಿದ್ದ ಬಳಿಕ, ಈಗ ಮಂಡ್ಯ ಮೂಲದ ಚಿಕ್ಕಕೆಂಪಮ್ಮ ಎಂಬ ಮಹಿಳೆಯೂ ತಾನು ಸೌಜನ್ಯಳ ಕಿಡ್ನಾಪ್ ಘಟನೆಯನ್ನು ಕಂಡಿದ್ದೇನೆ ಎಂದು ವಿಶೇಷ ತನಿಖಾ ದಳಕ್ಕೆ (SIT) ದೂರು ಸಲ್ಲಿಸಿದ್ದಾರೆ. ಈ ದೂರು ಪ್ರಕರಣಕ್ಕೆ ಮತ್ತಷ್ಟು ಗಂಭೀರ ತಿರುವು ನೀಡಿದೆ.
ಚಿಕ್ಕಕೆಂಪಮ್ಮ ತನ್ನ ದೂರಿನಲ್ಲಿ, ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾಲಯಕ್ಕೆ ತೆರಳಿದ್ದ ವೇಳೆ ಒಬ್ಬ ಹುಡುಗಿಯನ್ನು ಕಾರಿನಲ್ಲಿ ಕಿಡ್ನಾಪ್ ಮಾಡಿದ್ದನ್ನು ಕಂಡಿದ್ದೇನೆ ಎಂದು ತಿಳಿಸಿದ್ದಾರೆ. ಈ ಘಟನೆಯ ಬಗ್ಗೆ SIT ಅಧಿಕಾರಿಗಳು ದೂರವಾಣಿ ಮೂಲಕ 45 ನಿಮಿಷಗಳ ಕಾಲ ಚಿಕ್ಕಕೆಂಪಮ್ಮರಿಂದ ವಿವರಣೆ ಪಡೆದಿದ್ದಾರೆ. ಈ ಚರ್ಚೆ SIT ಸಹಾಯವಾಣಿ ಮೂಲಕ ನಡೆದಿದೆ ಎಂದು ಮಾಹಿತಿ ತಿಳಿದುಬಂದಿದೆ.
ಚಿನ್ನಯ್ಯ ಹೇಳಿದ್ದೇನು?
ಈ ಮಧ್ಯೆ, ಬುರುಡೆ ಚಿನ್ನಯ್ಯನ ಹೇಳಿಕೆ ಆಧರಿಸಿ ಸೌಜನ್ಯಳ ತಾಯಿ ಕುಸುಮಾವತಿ ಬೆಳ್ತಂಗಡಿ SIT ಕಚೇರಿಯಲ್ಲಿ ದೂರು ದಾಖಲಿಸಿದ್ದಾರೆ. ಚಿನ್ನಯ್ಯನ ವಿರುದ್ಧ ತನಿಖೆಗೆ ಆಗ್ರಹಿಸಿರುವ ಕುಸುಮಾವತಿ, 2014ರಲ್ಲಿ ಚಿನ್ನಯ್ಯ ಧರ್ಮಸ್ಥಳವನ್ನು ತೊರೆಯಲು ಸೌಜನ್ಯ ಕೊಲೆಯ ನಂತರದ ಘಟನೆಗಳೇ ಕಾರಣ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಚಿನ್ನಯ್ಯನ ಅಕ್ಕ ರತ್ನ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ನೀಡಿದ ಹೇಳಿಕೆಯಲ್ಲಿ, ರವಿ ಪೂಜಾರಿ ಎಂಬಾತನಿಗೆ ಸೌಜನ್ಯ ಕೊಲೆ ಮತ್ತು ಅತ್ಯಾಚಾರಕ್ಕೆ ಕಾರಣರಾದವರ ಹೆಸರನ್ನು ಚಿನ್ನಯ್ಯಗೆ ತಿಳಿಸಿದ್ದ ಎಂದು ಹೇಳಿದ್ದಾರೆ. ಇದರ ಜೊತೆಗೆ, ಸೌಜನ್ಯಳ ಶವ ಸಿಕ್ಕ ಸ್ಥಳದಲ್ಲಿ ಚಿನ್ನಯ್ಯ ಹಲವಾರು ಶವಗಳನ್ನು ಹೂತುಹಾಕಿದ್ದ ಎಂಬ ಆರೋಪವೂ ಇದೆ. ಈ ಸಂಚಿನ ಬಗ್ಗೆ ತನಿಖೆ ನಡೆಸಲು ಕುಸುಮಾವತಿ ಚಿನ್ನಯ್ಯನನ್ನು ನಾರ್ಕೋ ಪರೀಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಭೇಟಿ
ಇತ್ತೀಚೆಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧಿಕಾರಿಗಳು ಧರ್ಮಸ್ಥಳಕ್ಕೆ ಭೇಟಿ ನೀಡಿ, ಪಾಂಗಾಳದಲ್ಲಿ ಹೇಳಿಕೆ ಸಂಗ್ರಹಿಸಿದ್ದರು. ಆಗಸ್ಟ್ 13ರಂದು ಉಜಿರೆಗೆ ಚಿನ್ನಯ್ಯನ ಅಕ್ಕ ರತ್ನ ಹೇಳಿಕೆ ನೀಡಿದ್ದರು. ಈ ಎಲ್ಲ ಬೆಳವಣಿಗೆಗಳು ಸೌಜನ್ಯ ಪ್ರಕರಣವನ್ನು ಮತ್ತೆ ತೆರೆಯಲು ಕಾರಣವಾಗಿವೆ.
ಚಿಕ್ಕಕೆಂಪಮ್ಮರ ದೂರು ಮತ್ತು ಚಿನ್ನಯ್ಯನ ಹೇಳಿಕೆಗಳಿಂದಾಗಿ SIT ತನಿಖೆಯನ್ನು ಚುರುಕುಗೊಳಿಸಿದೆ.