ಬೆಳಗಾವಿ: ಪಾಕಿಸ್ತಾನದ ವಿರುದ್ಧ ಯುದ್ಧದ ಅಗತ್ಯವಿಲ್ಲ ಎಂದು ಹೇಳಿಕೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಾಕಿಸ್ತಾನದಲ್ಲಿದ್ರೆ ಒಳ್ಳೆಯದು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸಿದ್ದರಾಮಯ್ಯ ಅವರ ಈ ಹೇಳಿಕೆ ಕುರಿತು ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶೆಟ್ಟರ್, “ಸಿದ್ದರಾಮಯ್ಯ ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಒಕ್ಕೂಟ ವ್ಯವಸ್ಥೆಯಲ್ಲಿ ಇದ್ದಾರೆ. ಉಗ್ರರು 28 ಜನರನ್ನು ಭೀಕರವಾಗಿ ಕೊಲೆ ಮಾಡಿದ್ದಾರೆ. ಇದಕ್ಕೆ ಸರಿಯಾದ ಪಾಠ ಕಲಿಸಬೇಕೆಂದು ಜನ ಒಕ್ಕೊರಲಿನಿಂದ ಆಗ್ರಹಿಸುತ್ತಿದ್ದಾರೆ. ಜನರ ಭಾವನೆ ಮತ್ತು ಆಕ್ರೋಶ ತುಂಬಿರುವ ಈ ಸಂದರ್ಭದಲ್ಲಿ, ಸಿದ್ದರಾಮಯ್ಯ ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ ಕೀಳುಮಟ್ಟದ ಹೇಳಿಕೆ ನೀಡುತ್ತಿದ್ದಾರೆ,” ಎಂದು ಟೀಕಿಸಿದರು.
ಕೇಂದ್ರ ಸರ್ಕಾರವು ಈಗಾಗಲೇ ಹಲವು ನಿರ್ಧಾರಗಳನ್ನು ಕೈಗೊಂಡಿದ್ದು, ಸೂಕ್ತ ಸಂದರ್ಭದಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳುತ್ತಿದೆ ಎಂದ ಶೆಟ್ಟರ್, “ಕೇಂದ್ರ ಸರ್ಕಾರವು ಯುದ್ಧ ಘೋಷಣೆ ಮಾಡಿಲ್ಲ. ಆದರೆ, ಇಂತಹ ಸಂದರ್ಭದಲ್ಲಿ ಸಿದ್ದರಾಮಯ್ಯ ಕೀಳುಮಟ್ಟದ ಹೇಳಿಕೆ ನೀಡುತ್ತಿರುವುದು ಖಂಡನಾರ್ಹ. ಯುದ್ಧ ಮಾಡುವುದು ಅಥವಾ ಬಿಡುವುದು ಕೇಂದ್ರ ಸರ್ಕಾರಕ್ಕೆ ಬಿಟ್ಟ ವಿಷಯ. ಈ ಹೇಳಿಕೆ ದೇಶಕ್ಕೆ ಅವಮಾನ ತರುವಂತಿದೆ,” ಎಂದು ಕಿಡಿಕಾರಿದರು.
ಮುಂದುವರಿದು ಮಾತನಾಡಿದ ಅವರು, “ಈಗ ಸರಿಯಾದ ಉತ್ತರ ಕೊಡುವ ಸಮಯ ಬಂದಿದೆ. ದಾಳಿ ಮಾಡದಿದ್ದರೆ ಇಂತಹ ಘಟನೆಗಳು ಮರುಕಳಿಸುತ್ತವೆ. ಸಣ್ಣ ವಿಷಯವನ್ನೂ ಅರ್ಥಮಾಡಿಕೊಳ್ಳದ ಸಿಎಂ ನಮ್ಮಲ್ಲಿದ್ದಾರೆ. ಎಐಸಿಸಿ ಅಧ್ಯಕ್ಷರು ಕೇಂದ್ರ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದಾರೆ. ಆದರೆ, ಸಿದ್ದರಾಮಯ್ಯ ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ ಕೀಳುಮಟ್ಟದ ಹೇಳಿಕೆ ನೀಡುತ್ತಿದ್ದಾರೆ,” ಎಂದರು.
“ಪಾಕಿಸ್ತಾನದ ಟಿವಿ ಮಾಧ್ಯಮಗಳಲ್ಲಿ ಸಿದ್ದರಾಮಯ್ಯನವರ ಹೆಸರು ಕೇಳಿಬರುತ್ತಿದೆ. ಪಾಕಿಸ್ತಾನದಲ್ಲಿ ಜನಪ್ರಿಯರಾಗಲು ಅವರು ಹೊರಟಿದ್ದಾರೆ. ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ಶಿಫ್ಟ್ ಆಗೋದು ಒಳ್ಳೆಯದು,” ಎಂದು ಜಗದೀಶ್ ಶೆಟ್ಟರ್ ವ್ಯಂಗ್ಯವಾಡಿದರು.
ಈ ಹೇಳಿಕೆಯಿಂದ ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಸಿದ್ದರಾಮಯ್ಯನವರ ಈ ಹೇಳಿಕೆಯನ್ನು ಬಿಜೆಪಿಯಿಂದ ತೀವ್ರವಾಗಿ ಖಂಡಿಸಲಾಗಿದೆ.
