ಶಿವಮೊಗ್ಗ: ತಾಲೂಕಿನ ಗಾಜನೂರು ಅಗ್ರಹಾರದ ಬಳಿ ತೀರ್ಥಹಳ್ಳಿ ರಸ್ತೆಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಮಂಗಳೂರಿನಿಂದ ಚಳ್ಳಕೆರೆಗೆ ತೆರಳುತ್ತಿದ್ದ ದುರ್ಗಾಂಬ ಬಸ್, ಕೆಟ್ಟು ನಿಂತಿದ್ದ ಲಾರಿಯ ಹಿಂಬದಿಗೆ ಡಿಕ್ಕಿಯಾಗಿದೆ. ಈ ಘಟನೆಯಲ್ಲಿ ಬಸ್‌ನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಈ ದುರ್ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, 13ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಮೃತರಾದವರಲ್ಲಿ ಒಬ್ಬರನ್ನು ಅಣ್ಣಪ್ಪ (40) ಎಂದು ಗುರುತಿಸಲಾಗಿದೆ, ಆದರೆ ಇನ್ನೊಬ್ಬ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ. ಗಾಯಗೊಂಡವರಾದ ಉಮೇಶ್ (50), ಪ್ರಸಾದ್ (40), ವಿಷ್ಣು (21), ಮಂಜುನಾಥ್ (45), ಸುಜಾತ (40), ಆನಂದ್ ನಾಯ್ಕ್ (50), ನೀಲಾಂಬಿಕಾ (45), ಪ್ರಸಾದ್ (43), ಬಿಂದು (20), ಶಂಶಾಂಕ್ (20), ಲಕ್ಷ್ಮೀ (35), ಶ್ರೀರಾಮುಲು (42), ಮತ್ತು ಕಾರ್ತಿಕ್ (32) ರವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ತುಂಗಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಾಗಿದೆ.
ನಡು ರಸ್ತೆಯಲ್ಲೇ ಹೊತ್ತಿ ಉರಿದ ಕಾರು: ಇಬ್ಬರು ಪ್ರಾಣಾಪಾಯದಿಂದ ಪಾರು!
ತುಮಕೂರು: ಜಿಲ್ಲೆಯ ಗುಬ್ಬಿ ತಾಲೂಕಿನ ಯಲ್ಲಾಪುರ ಗೇಟ್ ಬಳಿಯ ರಾಷ್ಟ್ರೀಯ ಹೆದ್ದಾರಿ 73ರಲ್ಲಿ ಭೀಕರ ಘಟನೆಯೊಂದು ನಡೆದಿದೆ. ತುಮಕೂರಿನಿಂದ ಹೊಸದುರ್ಗದ ಶ್ರೀರಾಮಪುರ ಗ್ರಾಮಕ್ಕೆ ತೆರಳುತ್ತಿದ್ದ ಡಸ್ಟರ್ ಕಾರಿನಲ್ಲಿ ಇದ್ದಕ್ಕಿದ್ದಂತೆ ಹೊಗೆ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಕಾರು ಧಗಧಗನೆ ಹೊತ್ತಿ ಉರಿದಿದೆ. ಕಾರು ಮಾಲೀಕ ಹೇಮಂತ್ ಮತ್ತು ಡ್ರೈವರ್ ಕೂಡಲೇ ಕಾರಿನಿಂದ ಕೆಳಗಿಳಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಗ್ನಿಶಾಮಕ ದಳ ಮತ್ತು ಗುಬ್ಬಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಸುನಿಲ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಬೆಂಕಿ ನಂದಿಸಿದ್ದಾರೆ. ಆದರೆ, ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಈ ಘಟನೆಯ ಬಗ್ಗೆ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.