ಕರ್ನಾಟಕದಲ್ಲಿ ಇತ್ತೀಚಿಗೆ ಖಾಸಗಿ ಬಸ್‌ಗಳಲ್ಲಿ ಬೆಂಕಿ ಅಪಘಾತಗಳು ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇದೀಗ ಶಿವಮೊಗ್ಗ ಜಿಲ್ಲೆಯ ಹುಲಿಕಲ್ ಘಾಟ್‌ನಲ್ಲಿ ಮತ್ತೊಂದು ಭಯಾನಕ ಘಟನೆ ನಡೆದಿದೆ. ಕುಂದಾಪುರದಿಂದ ಶಿವಮೊಗ್ಗಕ್ಕೆ ಹೊರಟಿದ್ದ ಗಜಾನನ ಕಂಪನಿಯ ಶ್ರೀ ದುರ್ಗಾಂಬಾ ಖಾಸಗಿ ಬಸ್‌ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡು ಸಂಪೂರ್ಣವಾಗಿ ಧಗಧಗನೆ ಉರಿದು ಸುಟ್ಟುಹೋಗಿದೆ.
ಘಟನೆಯ ವಿವರ : ಬಸ್ ಹುಲಿಕಲ್ ಘಾಟ್‌ನಲ್ಲಿ ಚಂಡಿಕಾಂಬ ದೇಗುಲದ ಸಮೀಪದ ತಿರುವಿನಲ್ಲಿ ಸಂಚರಿಸುತ್ತಿದ್ದಾಗ ಇಂಜಿನ್‌ನಿಂದ ಬೆಂಕಿ ಕಾಣಿಸಿಕೊಂಡಿದೆ. ಚಾಲಕರು ತಕ್ಷಣ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸಿದ್ದರಿಂದ ದೊಡ್ಡ ಅಪಘಾತ ತಪ್ಪಿದೆ. ಬಸ್‌ನಲ್ಲಿ ಸುಮಾರು 36 ಪ್ರಯಾಣಿಕರು ಇದ್ದರು. ಎಲ್ಲರೂ ಸುರಕ್ಷಿತವಾಗಿ ಕೆಳಗಿಳಿದರು ಮತ್ತು ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಬೆಂಕಿ ತೀವ್ರವಾಗಿ ಹಬ್ಬಿ ಇಂಜಿನ್, ಸೀಟುಗಳು, ಟೈರ್‌ಗಳು ಸೇರಿದಂತೆ ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಅಗ್ನಿಶಾಮಕ ಯಂತ್ರ ಇದ್ದರೂ ಅದನ್ನು ಬಳಸಲು ಸಾಧ್ಯವಾಗಲಿಲ್ಲ ಎಂದು ವರದಿಯಾಗಿದೆ. ಬೆಂಕಿಗೆ ಕಾರಣ ಇಂಜಿನ್‌ನಲ್ಲಿ ಎಣ್ಣೆ ಸೋರಿಕೆಯೇ ಅಥವಾ ಘಾಟ್ ಏರುವಾಗ ಇಂಜಿನ್ ಅತಿಯಾಗಿ ಬಿಸಿಯಾಗಿದ್ದರಿಂದ ಎಂಬುದು ತನಿಖೆಯಲ್ಲಿ ಬಹಿರಂಗವಾಗಬೇಕಿದೆ.
ಹೊಸನಗರ ತಾಲೂಕಿನ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ತಿಳಿದ ತಕ್ಷಣ ಸಬ್ ಇನ್ಸ್ಪೆಕ್ಟರ್ ಶಿವಾನಂದ ಕೊಳಿ ನೇತೃತ್ವದಲ್ಲಿ ಪೊಲೀಸ್ ತಂಡ ಘಟನಾಸ್ಥಳಕ್ಕೆ ಧಾವಿಸಿತು. ಪ್ರಯಾಣಿಕರು ಸುರಕ್ಷಿತರಾಗಿ ಬೇರೆ ಬೇರೆ ಬಸ್‌ಗಳ ಮೂಲಕ ತಮ್ಮ ಗಂತವ್ಯಕ್ಕೆ ತೆರಳಿದ್ದಾರೆ.
ಇತ್ತೀಚಿಗೆ ಸ್ಲೀಪರ್ ಬಸ್‌ಗಳಲ್ಲಿ ಬೆಂಕಿ ಅಪಘಾತಗಳು ಹೆಚ್ಚಾಗುತ್ತಿರುವುದು ಗಮನಾರ್ಹ. ಬಸ್‌ಗಳಲ್ಲಿ ಅತಿಯಾಗಿ ಸಾಮಾನು ತುಂಬುವುದು, ಎಣ್ಣೆ ಸೋರಿಕೆ, ಓವರ್‌ಲೋಡ್ ಮತ್ತು ನಿರ್ವಹಣೆ ಕೊರತೆಗಳು ಇದಕ್ಕೆ ಕಾರಣವಾಗಬಹುದು ಎಂದು ತಜ್ಞರು ಅಭಿಪ್ರಾಯಪಡುತ್ತಿದ್ದಾರೆ. ಈ ಘಟನೆಯಿಂದ ಬಸ್ ಸಂಚಾರದ ಸುರಕ್ಷತೆಯ ಬಗ್ಗೆ ಮತ್ತೊಮ್ಮೆ ಚರ್ಚೆ ಆರಂಭವಾಗಿದೆ.
