ಶಬರಿಮಲೆ ಅಯ್ಯಪ್ಪ ದೇಗುಲದಲ್ಲಿ ಚಿನ್ನ ಕಳವು ಕೇಸ್‌: ಬೆಂಗಳೂರು, ಬಳ್ಳಾರಿ ಸೇರಿ ರಾಜ್ಯದ 5 ಕಡೆ ED ರೇಡ್

BeFunky collage 2026 01 20T120153.018

ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಹುಕೋಟಿ ಮೌಲ್ಯದ ಚಿನ್ನ ನಾಪತ್ತೆಯಾದ ಗಂಭೀರ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಜನವರಿ 20, 2026 ರಂದು ಬೆಳಗ್ಗೆಯೇ ದೊಡ್ಡ ಮಟ್ಟದ ದಾಳಿ ನಡೆಸಿದ್ದಾರೆ. ಕೇರಳ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಸುಮಾರು 21 ಸ್ಥಳಗಳಲ್ಲಿ ಏಕಕಾಲದಲ್ಲಿ ಶೋಧ ಕಾರ್ಯ ನಡೆದಿದೆ.

ಪ್ರಮುಖ ಆರೋಪಿ ಪೊಟ್ಟಿ ಉನ್ನಿಕೃಷ್ಣನ್ ಮನೆಯ ಮೇಲೆ ದಾಳಿ ಮುಖ್ಯ ಆರೋಪಿ ಪೊಟ್ಟಿ ಉನ್ನಿಕೃಷ್ಣನ್ ಅವರ ಬೆಂಗಳೂರಿನ ಶ್ರೀರಾಮಪುರದ ನಿವಾಸ ಹಾಗೂ ಕೇರಳದ ಕಿಲಿಮನೂರು ಸ್ಥಳದ ಮನೆಯ ಮೇಲೆ ಇಡಿ ತಂಡ ದಾಳಿ ನಡೆಸಿದೆ. ಇದಲ್ಲದೆ, ಮಾಜಿ ಆಡಳಿತಾಧಿಕಾರಿ ಮುರಾರಿ ಬಾಬು, ಇತರ ಆರೋಪಿಗಳ ನಿವಾಸಗಳು ಮತ್ತು ತಿರುವಾಂಕೂರು ದೇವಸ್ವಂ ಮಂಡಳಿ ಕಚೇರಿಯಲ್ಲೂ ಶೋಧ ನಡೆದಿದೆ. ಬೆಂಗಳೂರು ಮತ್ತು ಬಳ್ಳಾರಿಯಲ್ಲಿ ಇಡಿ ಅಧಿಕಾರಿಗಳ ತಂಡಗಳು ಅಕ್ರಮ ಆಸ್ತಿ, ಹಣಕಾಸು ವ್ಯವಹಾರಗಳ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಮಹತ್ವದ ದಾಖಲೆಗಳು ಮತ್ತು ಆಧಾರಗಳನ್ನು ವಶಪಡಿಸಿಕೊಂಡಿರುವ ಸಾಧ್ಯತೆ ಇದೆ.

ಬಳ್ಳಾರಿಯ ಜ್ಯುವೆಲರ್ ಗೋವರ್ಧನ್ ಅಂಗಡಿ ಮೇಲೆ ದಾಳಿ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿರುವ ಬಳ್ಳಾರಿಯ  ಜ್ಯುವೆಲರ್ ಮಾಲೀಕ ಗೋವರ್ಧನ್ ಅವರ ಅಂಗಡಿ ಮತ್ತು ನಿವಾಸಕ್ಕೂ ಇಡಿ ದಾಳಿ ನಡೆಸಿದೆ. ಮುನ್ನ 475 ಗ್ರಾಂನಷ್ಟು ಚಿನ್ನವನ್ನು ಇವರಿಗೆ ಮಾರಾಟ ಮಾಡಲಾಗಿದೆ ಎಂಬ ಆರೋಪವಿದೆ. ಈ ಹಿಂದೆ ಕೇರಳ ಎಸ್‌ಐಟಿ ಅಧಿಕಾರಿಗಳು ಇವರನ್ನು ಬಂಧಿಸಿದ್ದರು. ಇದೀಗ ಇಡಿ ತಂಡಗಳು ಸಿಬ್ಬಂದಿಯನ್ನು ವಿಚಾರಣೆಗೆ ಕರೆದು ತೀವ್ರ ತನಿಖೆ ನಡೆಸುತ್ತಿವೆ.

2019ರಲ್ಲಿ ಬೆಳಕಿಗೆ ಬಂದ ಹಗರಣದ ಹಿನ್ನೆಲೆ ಈ ಪ್ರಕರಣ 2019ರಲ್ಲಿ ಬೆಳಕಿಗೆ ಬಂದಿತ್ತು. ಶಬರಿಮಲೆ ಗರ್ಭಗುಡಿಯ ಬಾಗಿಲ ಚೌಕಟ್ಟುಗಳು ಮತ್ತು ದ್ವಾರಪಾಲಕ ವಿಗ್ರಹಗಳ ಮೇಲೆ ಲೇಪಿಸಲಾಗಿದ್ದ ಸುಮಾರು 4-4.5 ಕಿಲೋಗ್ರಾಂ ಚಿನ್ನವನ್ನು ಕದ್ದು ದುರುಪಯೋಗ ಮಾಡಲಾಗಿದೆ ಎಂಬ ಆರೋಪವಿದೆ. ಎಲೆಕ್ಟ್ರೋಪ್ಲೇಟಿಂಗ್ ನೆಪದಲ್ಲಿ ಚಿನ್ನ ಲೇಪಿತ ತಾಮ್ರದ ಹೊದಿಕೆಯನ್ನು ಪಡೆದು, ಅನುಮತಿ ಇಲ್ಲದೆ ದಕ್ಷಿಣ ಭಾರತದ ವಿವಿಧ ದೇವಾಲಯಗಳು ಮತ್ತು ಖಾಸಗಿ ವ್ಯಕ್ತಿಗಳಿಗೆ ಸಾಗಿಸಲಾಗಿದೆ ಎನ್ನಲಾಗಿದೆ.

ಪೊಟ್ಟಿ ಉನ್ನಿಕೃಷ್ಣನ್ 2019ರವರೆಗೆ ಶಬರಿಮಲೆಯಲ್ಲಿ ವಿಐಪಿ ಭಕ್ತರ ದರ್ಶನ ವ್ಯವಸ್ಥೆಯ ಕೋಆರ್ಡಿನೇಟರ್ ಆಗಿದ್ದರು. ಈ ಸ್ಥಾನವನ್ನು ಬಳಸಿಕೊಂಡು ಪ್ರಭಾವಿಗಳೊಂದಿಗೆ ಸಂಪರ್ಕ ಬೆಳೆಸಿ ಅಕ್ರಮ ಚಟುವಟಿಕೆಗಳನ್ನು ನಡೆಸಿದ್ದಾರೆ ಎಂಬ ಆರೋಪವಿದೆ. ಮುರಾರಿ ಬಾಬು ಸಹ ಈ ಕೃತ್ಯಕ್ಕೆ ಸಹಾಯ ಮಾಡಿದ್ದಾರೆ ಎಂದು ತನಿಖೆ ತಿಳಿಸಿದೆ.

PMLA ಅಡಿಯಲ್ಲಿ ಇಡಿ ತನಿಖೆ ಹಣ ಶುದ್ಧೀಕರಣ ತಡೆ ಕಾಯ್ದೆ ಅಡಿಯಲ್ಲಿ ಇಡಿ ತನಿಖೆ ಆರಂಭಿಸಿದ್ದು, ಹಣದ ಜಾಲ, ಅಕ್ರಮ ಆಸ್ತಿ ಮತ್ತು ಮನಿ ಲಾಂಡರಿಂಗ್‌ಗೆ ಸಂಬಂಧಿಸಿದ ಎಲ್ಲಾ ಅಂಶಗಳನ್ನು ಪರಿಶೀಲಿಸಲಾಗುತ್ತಿದೆ. ಈ ಹಿಂದೆ ಕೇರಳ ಎಸ್‌ಐಟಿ ತನಿಖೆ ನಡೆಸಿ 13ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಿದೆ. ಇದೀಗ ಇಡಿ ಪ್ರಕರಣವನ್ನು ಸಂಪೂರ್ಣವಾಗಿ ಕೈಗೆತ್ತಿಕೊಂಡಿದೆ.

ದಾಳಿಗಳು ಮುಂದುವರೆದಿದ್ದು, ಹೆಚ್ಚಿನ ಬರ್ಹಿರಂಗಗಳು ಬಹಿರಂಗವಾಗುವ ಸಾಧ್ಯತೆ ಇದೆ. ಈ ಹಗರಣ ದೇವಾಲಯದ ಪವಿತ್ರತೆಗೆ ದೊಡ್ಡ ಆಘಾತ ನೀಡಿದ್ದು, ಭಕ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Exit mobile version