ರಾಯರ ಮಠಕ್ಕೆ ಭಕ್ತರ ದಂಡು: ಹುಂಡಿಯಲ್ಲಿ ಕೋಟ್ಯಂತರ ರೂ. ಸಂಗ್ರಹ

ಪಟ್ಟೆ ತಲೆ ಹೆಬ್ಬಾತು ಪ್ರಕರಣ (6)

ರಾಯಚೂರು ಸೆ. 09: ಕಲಿಯುಗ ಕಾಮಧೇನು ಎಂದೇ ಪ್ರಸಿದ್ಧವಾಗಿರುವ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಕಾಣಿಕೆ ಹುಂಡಿ ಎಣಿಕೆ ಕಾರ್ಯ ಮುಕ್ತಾಯಗೊಂಡಿದ್ದು, ಕೇವಲ 16 ದಿನಗಳಲ್ಲಿ ಬರೋಬ್ಬರಿ ರೂ. 3 ಕೋಟಿ 30 ಲಕ್ಷ 69,139 ಕಾಣಿಕೆ ಸಂಗ್ರಹವಾಗಿದೆ. ಶ್ರೀ ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವದ ಹಿನ್ನೆಲೆಯಲ್ಲಿ ಮಠಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗಿದ್ದರಿಂದ ಕಾಣಿಕೆ ಪ್ರಮಾಣದಲ್ಲೂ ಭಾರೀ ಏರಿಕೆಯಾಗಿದೆ.

ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ 16 ದಿನಗಳ ಅವಧಿಯಲ್ಲಿ ನಡೆದ ಹುಂಡಿ ಎಣಿಕೆಯಲ್ಲಿ ಕೋಟ್ಯಂತರ ರೂಪಾಯಿ ಸಂಗ್ರಹವಾಗಿದೆ. ಒಟ್ಟು ಕಾಣಿಕೆಯಲ್ಲಿ ರೂ. 3 ಕೋಟಿ 20 ಲಕ್ಷ 66,639 ಮೌಲ್ಯದ ಕರೆನ್ಸಿ ನೋಟುಗಳು ಹಾಗೂ ರೂ. 10 ಲಕ್ಷ 2,500 ಮೌಲ್ಯದ ನಾಣ್ಯಗಳು ಸೇರಿವೆ ಎಂದು ತಿಳಿದು ಬಂದಿದೆ.

ಚಿನ್ನ ಮತ್ತು ಬೆಳ್ಳಿಯನ್ನೂ ಕಾಣಿಕೆ

ಹಣದ ಜೊತೆಗೆ ಭಕ್ತರು ಚಿನ್ನ ಮತ್ತು ಬೆಳ್ಳಿಯನ್ನೂ ಕಾಣಿಕೆ ರೂಪದಲ್ಲಿ ಅರ್ಪಿಸಿದ್ದಾರೆ. ಹುಂಡಿಯಲ್ಲಿ 47 ಗ್ರಾಂ ಚಿನ್ನ ಹಾಗೂ 632 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ ಎಂದು ಮಠದ ಮೂಲಗಳಿಂದ ತಿಳಿದು ಬಂದಿದೆ.

16 ದಿನಗಳಲ್ಲೇ ಕೋಟಿಗಟ್ಟಲೆ ತಲುಪಿದ ಕಾಣಿಕೆ ಮೊತ್ತ 

ಪ್ರತಿ ತಿಂಗಳಂತೆ ಮಂತ್ರಾಲಯಕ್ಕೆ ಈ ಬಾರಿಯೂ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಅದರಲ್ಲೂ ಗುರು ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವದ ಹಿನ್ನೆಲೆಯಲ್ಲಿ ದೇಶದ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಮಂತ್ರಾಲಯಕ್ಕೆ ಆಗಮಿಸಿ ಶ್ರೀ ರಾಯರ ದರ್ಶನ ಪಡೆದಿದ್ದರು. ಹೀಗಾಗಿ 16 ದಿನಗಳಲ್ಲೇ ಕಾಣಿಕೆ ಮೊತ್ತ ಕೋಟಿಗಟ್ಟಲೆ ತಲುಪಿದೆ ಎಂದು ಹೇಳಲಾಗುತ್ತಿದೆ.

ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ನಡೆದ ಹುಂಡಿ ಎಣಿಕೆ ಕಾರ್ಯದಲ್ಲಿ ಮಠದ ನೂರಾರು ಸಿಬ್ಬಂದಿ, ಭಜನಾ ಮಂಡಳಿಯ ಸದಸ್ಯರು ಹಾಗೂ ಕರಸೇವಕರು ಭಾಗವಹಿಸಿದ್ದರು. ಎಣಿಕೆ ಪ್ರಕ್ರಿಯೆ ನಡೆಯುವ ವೇಳೆ ಮುಜರಾಯಿ ಇಲಾಖೆ ಅಧಿಕಾರಿಗಳು ಮತ್ತು ಶ್ರೀಮಠದ ಅಧಿಕಾರಿಗಳು ಕೂಡ ಉಪಸ್ಥಿತರಿದ್ದು, ಸಂಪೂರ್ಣ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡಿದರು.

ಆರಾಧನಾ ಮಹೋತ್ಸವದ ಸಂದರ್ಭದಲ್ಲಿ ಭಕ್ತರ ಭಾರೀ ಹರಿವು ಕಂಡುಬಂದಿದ್ದು, ಅದರ ಪ್ರತಿಫಲ ಹುಂಡಿ ಕಾಣಿಕೆಯಲ್ಲೂ ವ್ಯಕ್ತವಾಗಿದೆ. ಮಠದ ಇತಿಹಾಸದಲ್ಲೇ ದಾಖಲೆ ಮಟ್ಟದ ಕಾಣಿಕೆ ಸಂಗ್ರಹವಾಗಿದೆ ಎಂಬುದು ಭಕ್ತರಲ್ಲಿ ವಿಶೇಷ ಗಮನ ಸೆಳೆದಿದೆ.

Exit mobile version