ರಾಯಚೂರಿನಲ್ಲಿ ಫೋಟೊಶೂಟ್ ನೆಪದಲ್ಲಿ ಪತಿಯನ್ನೇ ನದಿಗೆ ತಳ್ಳಿದ ಪತ್ನಿ!

Your paragraph text (6)

ರಾಯಚೂರು: ತಾಲೂಕಿನ ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್‌ನಲ್ಲಿ ಮಹಿಳೆಯೊಬ್ಬರು ತನ್ನ ಪತಿಯನ್ನು ಕೃಷ್ಣಾ ನದಿಗೆ ತಳ್ಳಿದ ಆಘಾತಕಾರಿ ಘಟನೆ ನಡೆದಿದೆ. ಫೋಟೊಶೂಟ್ ನೆಪದಲ್ಲಿ ಪತಿಯನ್ನು ಪುಸಲಾಯಿಸಿ ಬ್ರಿಡ್ಜ್‌ಗೆ ಕರೆದೊಯ್ದ ಮಹಿಳೆ, ಈ ಕೃತ್ಯವನ್ನು ಎಸಗಿದ್ದಾಳೆ.

ಗಂಡನನ್ನು ಬ್ರಿಡ್ಜ್‌ನ ಅಂಚಿನಲ್ಲಿ ಫೋಟೊಗೆ ನಿಲ್ಲುವಂತೆ ಮಾಡಿದ ಪತ್ನಿ, ಆತ ಬ್ರಿಡ್ಜ್‌ನ ತುದಿಯಲ್ಲಿದ್ದಾಗ ಆತನನ್ನು ಕೆಳಕ್ಕೆ ತಳ್ಳಿದ್ದಾಳೆ. ಕೃಷ್ಣಾ ನದಿಯಲ್ಲಿ ಹರಿವು ತೀವ್ರವಾಗಿರುವುದರಿಂದ, ಆ ವ್ಯಕ್ತಿ ಸ್ವಲ್ಪ ದೂರ ಕೊಚ್ಚಿಕೊಂಡು ಹೋಗಿದ್ದಾನೆ. ಆದರೆ, ಈಜು ಚೆನ್ನಾಗಿ ತಿಳಿದಿದ್ದರಿಂದ, ಆತ ನದಿಯ ಮಧ್ಯ ಭಾಗದ ಬಂಡೆಯೊಂದರ ಮೇಲೆ ಕುಳಿತು ತನ್ನನ್ನು ತಾನು ರಕ್ಷಿಸಿಕೊಂಡಿದ್ದಾನೆ.

ವ್ಯಕ್ತಿಯ ಕಿರುಚಾಟ ಕೇಳಿ ಸ್ಥಳೀಯರು ಧಾವಿಸಿ, ಜಮೀನುಗಳಲ್ಲಿ ಲಭ್ಯವಿದ್ದ ಹಗ್ಗವನ್ನು ಬಳಸಿ ಸತತ ಎರಡು ಗಂಟೆಗಳ ಕಾರ್ಯಾಚರಣೆಯ ಮೂಲಕ ಆತನನ್ನು ರಕ್ಷಿಸಿದ್ದಾರೆ. ರಕ್ಷಣೆಯಾದ ಬಳಿಕ, ಆ ವ್ಯಕ್ತಿ ತನ್ನ ಪತ್ನಿಯೇ ತನ್ನನ್ನು ಉದ್ದೇಶಪೂರ್ವಕವಾಗಿ ನದಿಗೆ ತಳ್ಳಿದ್ದಾಳೆ ಎಂದು ಆರೋಪಿಸಿದ್ದಾನೆ. ಆದರೆ, ಮಹಿಳೆಯು ತನ್ನ ಪತಿ ಕಾಲು ಜಾರಿ ಬಿದ್ದಿದ್ದಾನೆ ಎಂದು ವಾದಿಸಿದ್ದಾಳೆ.

ಕೆಲವು ಪ್ರತ್ಯಕ್ಷದರ್ಶಿಗಳು ಮಹಿಳೆಯೇ ಆತನನ್ನು ತಳ್ಳಿದ್ದಾಳೆ ಎಂದು ದೃಢಪಡಿಸಿದ್ದಾರೆ. ಆದರೆ, ಪೊಲೀಸರಿಗೆ ಮಾಹಿತಿ ತಿಳಿಯುವ ಭಯದಿಂದ ಮಹಿಳೆ ತನ್ನ ಪತಿಯನ್ನು ತರಾತುರಿಯಲ್ಲಿ ಪುಸಲಾಯಿಸಿ ಕರೆದೊಯ್ದಿದ್ದಾಳೆ. ಈ ಘಟನೆಗೆ ಸಂಬಂಧಿಸಿದಂತೆ ರಾಯಚೂರು ಪೊಲೀಸ್ ಠಾಣೆಯಲ್ಲಿ ತನಿಖೆ ಆರಂಭವಾಗಿದೆ.

Exit mobile version