ರಾಯಚೂರು: ಇತ್ತೀಚಗೆ ಲವ್ ಮಾಡಿ ಓಡಿ ಹೋಗುವವರ ಸಂಖ್ಯೆ ಹೆಚ್ಚಾಗಿದೆ. ತಾವು ಪ್ರೀತಿಸಿದ ಯುವಕ ಅಥವಾ ಯುವತಿಯನ್ನು ಮದುವೆಯಾಗುವ ಯೋಗ ಎಲ್ಲರಿಗೂ ಸಿಗುವುದಿಲ್ಲ. ಒಂದು ವೇಳೆ ಸಿಕ್ಕರೇ ಅವರಂತ ಅದೃಷ್ಟವಂತರು ಈ ಭೂಮಿ ಮೇಲೆ ಮತ್ಯಾರಿಲ್ಲ.
ಹೌದು, ಎಲ್ಲಾ ಲವ್ ಸ್ಟೋರಿಗಳು ಯಶಸ್ವಿಯಾಗುತ್ತವೆ ಎಂದು ಹೇಳಲಾಗುವುದಿಲ್ಲ. ಆದರೆ ರಾಯಚೂರಿನಲ್ಲಿ ವಿಭಿನ್ನ ಲವ್ ಸ್ಟೋರಿ ಒಂದು ಬೆಳಕಿಗೆ ಬಂದಿದೆ. ನಾ ಡ್ರೈವರ.. ನೀ ನನ್ನ ಲವ್ವರ ಅಂತಿದ್ದವನು ಇದೀಗ ಒಂಟಿಯಾಗಿದ್ದಾನೆ. ಆರು ವರ್ಷ ಕಾದು ಮದುವೆ ಆದವರು ಇದೀಗ ದೂರವಾಗಿದ್ದಾರೆ.
ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಈಚನಾಳ ಗ್ರಾಮದ ರಮೇಶ್ ಹಾಗೂ ಯಶೋಧಾ ಹೈಸ್ಕೂಲ್ ಫ್ರೆಂಡ್ಸ್. ಬಳಿಕ ಕಾಲೇಜಿನಲ್ಲಿದ್ದಾಗ ಇಬ್ಬರ ಮಧ್ಯೆ ಲವ್ವಿ-ಡವ್ವಿ ಶುರುವಾಗಿದೆ. ಆರು ವರ್ಷದಿಂದ ಲವ್ ಮಾಡಿದ್ದಾರೆ. ಕೈ ಕೈ ಹಿಡಿದು ಓಡಾಡಿದ್ದಾರೆ. ಬೈಕ್ ಏರಿ ಸ್ಟೈಲೀಶ್ ಆಗಿ ರೀಲ್ಸ್ ಕೂಡ ಮಾಡಿದ್ದರು.
ಯಶೋಧಾಗೆ 18 ವರ್ಷವಾಗಲಿ ಎಂದು ರಮೇಶ್ ಆರು ವರ್ಷ ತಡೆದಿದ್ದ. ಆಕೆಗಾಗಿ ಓದು ಅರ್ಧಕ್ಕೆ ಬಿಟ್ಟು ಕಾರು ಚಾಲಕನಾಗಿ ಕೆಲಸ ಮಾಡುವುದಕ್ಕೆ ಶುರು ಮಾಡಿದ್ದ. ಈ ಮಧ್ಯೆ ಕಳೆದ 15 ದಿನಗಳ ಹಿಂದಷ್ಟೇ ಸಿಂಧನೂರಿನಲ್ಲಿ ಇಬ್ಬರೂ ಖುಷಿ ಖುಷಿಯಾಗಿ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿದ್ದಾರೆ.
ಯೋಶೋಧಾ ಕುಟುಂಬಸ್ಥರಿಂದ ನಾಪತ್ತೆ ದೂರು
ಮದುವೆ ಬಳಿಕ ರಮೇಶ್ ಹಾಗೂ ಯೋಶೋಧಾ ಇತ್ತ ಬೆಂಗಳೂರಿಗೆ ಬಂದು ಜೀವನ ನಡೆಸುತ್ತಿದ್ದರು. ಈ ಮಧ್ಯೆ ಲಿಂಗಸುಗೂರು ಠಾಣೆಗೆ ಯೋಶೋಧಾ ಕುಟುಂಬಸ್ಥರಿಂದ ನಾಪತ್ತೆ ದೂರು ನೀಡಲಾಗಿದೆ. ಆ ಬಳಿಕ ರಮೇಶ್‌ಗೆ ಲಿಂಗಸುಗೂರು ಪೊಲೀಸರು ಕರೆ ಮಾಡಿ ವಿಚಾರಣೆಗೆಂದು ಠಾಣೆಗೆ ಕರೆದಿದ್ದಾರೆ.
ರಿಜಿಸ್ಟರ್ ಮ್ಯಾರೇಜ್ ಆದರೂ ಯಶೋಧಾಳನ್ನ ಆಕೆ ಪೋಷಕರ ಜೊತೆ ಕಳುಹಿಸಿಕೊಟ್ಟಿದ್ದಾರೆ. ಪೊಲೀಸರು ಸ್ಥಳೀಯ ಜನಪ್ರತಿನಿಧಿಯೊಬ್ಬರ ಒತ್ತಡಕ್ಕೆ ಮಣಿದು ಹೀಗೆ ಮಾಡಿದ್ದಾರೆ ಎಂದು ಆರೋಪ ಕೂಡ ಕೇಳಿಬಂದಿದ್ದು, ಸದ್ಯ ರಮೇಶ್ ನ್ಯಾಯಕ್ಕಾಗಿ ಅಲೆದಾಡುತ್ತಿದ್ದಾರೆ.
