ರಾಯಚೂರು: ಜಿಲ್ಲೆಯ ಗುರ್ಜಾಪುರ ಬ್ಯಾರೇಜ್ ಬಳಿ ಜುಲೈ 19ರಂದು ನಡೆದ ಘಟನೆಯಲ್ಲಿ, ಫೋಟೊ ತೆಗೆಯುವ ನೆಪದಲ್ಲಿ ಪತ್ನಿ ತನ್ನ ಪತಿಯನ್ನು ನದಿಗೆ ತಳ್ಳಿದ ಆರೋಪದ ಪ್ರಕರಣಕ್ಕೆ ದೊಡ್ಡ ತಿರುವು ಸಿಕ್ಕಿದೆ. ಈಗ ಆರೋಪಿಯಾಗಿದ್ದ ಪತ್ನಿಯ ಬದಲಿಗೆ, ಪತಿ ತಾತಪ್ಪ ಮತ್ತು ಆತನ ಕುಟುಂಬದವರ ವಿರುದ್ಧ ರಾಯಚೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಹೌದು, ತಾತಪ್ಪ ಎಂಬ ವ್ಯಕ್ತಿಯು 15 ವರ್ಷ 8 ತಿಂಗಳ ಅಪ್ರಾಪ್ತ ಬಾಲಕಿಯನ್ನು ಬಾಲ್ಯ ವಿವಾಹ ಮಾಡಿಕೊಂಡಿರುವುದು ತನಿಖೆಯಲ್ಲಿ ದೃಢಪಟ್ಟಿದೆ. ಈ ಸಂಬಂಧ ತಾತಪ್ಪ, ಆತನ ತಾಯಿ, ಮತ್ತು ಅಪ್ರಾಪ್ತ ಬಾಲಕಿಯ ತಾಯಿ ಸೇರಿ ಮೂವರ ವಿರುದ್ಧ ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ಕೇಸು ದಾಖಲಾಗಿದೆ. ತನಿಖಾ ಅಧಿಕಾರಿಗಳು ಮದುವೆ ಆಮಂತ್ರಣ ಪತ್ರಿಕೆ ಮತ್ತು ಶಾಲಾ ದಾಖಲಾತಿಗಳನ್ನು ಪರಿಶೀಲಿಸಿದಾಗ, ಬಾಲಕಿಯ ವಯಸ್ಸು ಅಪ್ರಾಪ್ತ ಎಂದು ದೃಢವಾಗಿದೆ.
ರಾಜ್ಯ ಮಕ್ಕಳ ಹಕ್ಕುಗಳ ಆಯೋಗವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ರಾಯಚೂರು ಮತ್ತು ಯಾದಗಿರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಕೇಸು ದಾಖಲಿಸಲು ಸೂಚಿಸಿತ್ತು. ದೇವಸುಗೂರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವಿಕುಮಾರ್ ಈ ಸಂಬಂಧ ದೂರು ದಾಖಲಿಸಿದ್ದಾರೆ.
ಅಪ್ರಾಪ್ತ ಬಾಲಕಿಯ ರಕ್ಷಣೆ:
ತಾತಪ್ಪನ ಕುಟುಂಬಕ್ಕೆ ಬಾಲಕಿಯ ವಯಸ್ಸಿನ ಸೂಕ್ತ ದಾಖಲೆ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಆದರೆ, ಯಾವುದೇ ಸಮರ್ಪಕ ದಾಖಲೆ ಸಿಗದ ಕಾರಣ, ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ಯಾದಗಿರಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ಈಗಾಗಲೇ ಅಪ್ರಾಪ್ತ ಬಾಲಕಿಯನ್ನು ರಕ್ಷಿಸಿ, ಯಾದಗಿರಿ ಜಿಲ್ಲಾ ಬಾಲಕಿಯರ ಬಾಲಮಂದಿರಕ್ಕೆ ದಾಖಲಿಸಿದೆ.
ರಾಯಚೂರು ಮಹಿಳಾ ಪೊಲೀಸ್ ಠಾಣೆಯು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದೆ.