ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ಧದ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಆರೋಪಗಳಿಗೆ ಸಂಬಂಧಿಸಿದ ವಿಚಾರಣೆಯಲ್ಲಿ, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ತೀರ್ಪನ್ನು ಆಗಸ್ಟ್ 1ಕ್ಕೆ ಮುಂದೂಡಿದೆ. 26 ಸಾಕ್ಷಿಗಳ ವಿಚಾರಣೆಯನ್ನು ಪೂರ್ಣಗೊಳಿಸಿದ ನಂತರ, ನ್ಯಾಯಾಲಯವು ಈ ಆದೇಶವನ್ನು ನೀಡಿದೆ.
ಕೆ.ಆರ್. ನಗರ ಮೂಲದ ಮನೆಗೆಲಸದ ಮಹಿಳೆಯೊಬ್ಬರು ದಾಖಲಿಸಿದ ದೂರಿನ ಆಧಾರದ ಮೇಲೆ ಸಿಐಡಿ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಂತ್ರಸ್ತೆಯ ಹೇಳಿಕೆ, ಸಾಂದರ್ಭಿಕ ಸಾಕ್ಷ್ಯಗಳು ಮತ್ತು ಎಫ್‌ಎಸ್‌ಎಲ್ (ಫಾರೆನ್ಸಿಕ್ ಸೈನ್ಸ್ ಲ್ಯಾಬೊರೇಟರಿ) ವರದಿಯನ್ನು ನ್ಯಾಯಾಲಯವು ಪರಿಗಣಿಸಿತ್ತು. ಈ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣನವರ ರಾಜಕೀಯ ಭವಿಷ್ಯವೂ ತೀರ್ಮಾನವಾಗಲಿದೆ.
ಪ್ರಜ್ವಲ್ ರೇವಣ್ಣ ವಿರುದ್ಧ ಒಟ್ಟು ನಾಲ್ಕು ಪ್ರಕರಣಗಳು ದಾಖಲಾಗಿವೆ, ಅದರಲ್ಲಿ ಮೂರು ಅತ್ಯಾಚಾರ ಮತ್ತು ಒಂದು ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದವು. ಈ ಪೈಕಿ ಕೆ.ಆರ್. ನಗರ ಪ್ರಕರಣವು ನಿರ್ಣಾಯಕ ಹಂತವನ್ನು ತಲುಪಿತ್ತು. 2024ರ ಏಪ್ರಿಲ್‌ನಲ್ಲಿ ಲೈಂಗಿಕ ಹಗರಣಕ್ಕೆ ಸಂಬಂಧಿಸಿದ ಪೆನ್‌ಡ್ರೈವ್ ವೈರಲ್ ಆದ ನಂತರ, ಪ್ರಜ್ವಲ್ ರೇವಣ್ಣ ಜರ್ಮನಿಗೆ ಪರಾರಿಯಾಗಿದ್ದರು. ಇದಾದ ಬಳಿಕ, ಇಂಟರ್‌ಪೋಲ್ ಮೂಲಕ ರೆಡ್ ಕಾರ್ನರ್ ನೋಟಿಸ್ ಜಾರಿಗೊಂಡಿತ್ತು. 2024ರ ಮೇ 31ರಂದು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅವರನ್ನು ವಿಶೇಷ ತನಿಖಾ ತಂಡ (SIT) ಬಂಧಿಸಿತ್ತು.
ವೈದ್ಯಕೀಯ ವಿಚಾರಣೆಗೆ ಆದೇಶ:
ವಿಚಾರಣೆಯ ಸಂದರ್ಭದಲ್ಲಿ, ಪ್ರಜ್ವಲ್ ರೇವಣ್ಣನವರ ಪರ ವಕೀಲರು ಅವರಿಗೆ ತೀವ್ರ ಬೆನ್ನು ನೋವಿನಿಂದಾಗಿ ಬ್ಲಾಕ್ ಬೆಲ್ಟ್ ಧರಿಸಲು ಅನುಮತಿ ಕೋರಿದ್ದರು. ಆದರೆ, ವಿಶೇಷ ಸರ್ಕಾರಿ ಅಭಿಯೋಜಕ (SPP) ಬಿಎನ್ ಜಗದೀಶ್, ಸೂಕ್ತ ವೈದ್ಯಕೀಯ ದಾಖಲೆಗಳಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯೆಯಾಗಿ, ಪ್ರಜ್ವಲ್‌ನವರ ವಕೀಲರು ಜೈಲಿನಲ್ಲಿ ಸೂಕ್ತ ವೈದ್ಯಕೀಯ ಸೌಲಭ್ಯಗಳಿಲ್ಲ ಎಂದು ವಾದಿಸಿದರು.
ನ್ಯಾಯಾಲಯವು ಈ ವಿಷಯದಲ್ಲಿ ವಿಕ್ಟೋರಿಯಾ ಆಸ್ಪತ್ರೆ ಸೇರಿದಂತೆ ಇತರ ಸರ್ಕಾರಿ ಆಸ್ಪತ್ರೆಗಳಿಂದ ವೈದ್ಯಕೀಯ ಅಭಿಪ್ರಾಯ ಪಡೆಯಲು ಜೈಲು ಅಧಿಕಾರಿಗಳಿಗೆ ಸೂಚಿಸಿದೆ. ಅಗತ್ಯ ಪರೀಕ್ಷೆಗಳನ್ನು ನಡೆಸಿ, ವರದಿಯನ್ನು ಕೋರ್ಟ್‌ಗೆ ಸಲ್ಲಿಸುವಂತೆ ಆದೇಶಿಸಲಾಗಿದೆ. ವೈದ್ಯರು ಬ್ಲಾಕ್ ಬೆಲ್ಟ್ ಧರಿಸಲು ಸಲಹೆ ನೀಡಿದರೆ, ಅದಕ್ಕೆ ಅನುಮತಿ ನೀಡಬಹುದು ಎಂದು ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಸೂಚಿಸಿದ್ದಾರೆ.