ಬೆಂಗಳೂರು: ಮೈಸೂರು ಮಾಜಿ ಸಂಸದ “ಪ್ರತಾಪ್ ಸಿಂಹ ಅವರ ತಂದೆ-ತಾಯಿ ದೈವ ಭಕ್ತರಿರಬೇಕು, ಅದಕ್ಕೆ ಅವರಿಗೆ ಪ್ರತಾಪ್ ಎಂದು ಹೆಸರಿಟ್ಟಿದ್ದಾರೆ. ಇಲ್ಲವಾದರೆ ಕೋತಿ ಎಂದು ಹೆಸರಿಡುತ್ತಿದ್ದರು,” ಎಂದು ಶಾಸಕ ಪ್ರದೀಪ್ ಈಶ್ವರ್ ವ್ಯಂಗ್ಯವಾಡಿದ್ದದಾರೆ.
ಇಂದು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರತಾಪ್ ಸಿಂಹ ಅವರಿಗೆ ಅಸ್ತಿತ್ವದ ಕೊರತೆ ಕಾಡುತ್ತಿದೆ ಎಂದರು. “ನಾನು ಅವರನ್ನು ಸಿಂಹ ಎಂದು ಕರೆಯುವುದಿಲ್ಲ. ಸಿಂಹವಾದರೆ ಘರ್ಜಿಸಬೇಕು, ಬಾಯಿ ಬಡಿದುಕೊಳ್ಳಬಾರದು. ಬಿಜೆಪಿಯವರು ಪ್ರತಾಪ್ ಅವರನ್ನು ಒದ್ದು ಹೊರಗೆ ಹಾಕಿದ್ದಾರೆಯೇ ಗೊತ್ತಿಲ್ಲ, ಆದರೆ ಹೊರಗಂತೂ ಹಾಕಿದ್ದಾರೆ. “ಯತ್ನಾಳ್ ಮತ್ತು ಪ್ರತಾಪ್ ಸಿಂಹಗೆ ಹಿಂದೂ ಧರ್ಮದ ಬಗ್ಗೆ ಮಾತನಾಡುವ ಹಕ್ಕನ್ನು ಯಾರು ಕೊಟ್ಟರು? ನಿಮ್ಮ ತಾತ ಏನು ವಿಲ್ ಬರೆದುಕೊಟ್ಟಿದ್ದಾರೆಯೇ?” ಎಂದು ಪ್ರಶ್ನಿಸಿದರು.
“ಯತ್ನಾಳ್, ಪ್ರತಾಪ್ ಫೈರ್ ಅಲ್ಲ, ಬಿಜೆಪಿಯಿಂದ ಕಿತ್ತುಬಿಸಾಡಿದ ಪೈರು”
ಪ್ರತಾಪ್ ಸಿಂಹ ಮತ್ತು ಶಾಸಕ ಯತ್ನಾಳ್ ವಿರುದ್ಧ ಗುಡುಗಿದ ಪ್ರದೀಪ್ ಈಶ್ವರ್, “ಪ್ರತಾಪ್‌ಗೆ ಕೆಲಸವಿಲ್ಲ, ರಾಜ್ಯ ರಾಜಕಾರಣಕ್ಕೆ ಅವರು ಸೂಕ್ತರಲ್ಲ. ಅಷ್ಟು ಅಹಂಕಾರ, ದುರಹಂಕಾರ ಇದ್ದರೆ ರಾಜ್ಯ ರಾಜಕಾರಣಕ್ಕೆ ಒಗ್ಗುವುದಿಲ್ಲ. ಮೈಸೂರು ಎಂಪಿಯವರು ತಮ್ಮ ಸ್ಥಾನವನ್ನು ಪ್ರತಾಪ್‌ಗೆ ಬಿಟ್ಟುಕೊಡುತ್ತಾರೆಯೇ? ಖಂಡಿತ ಇಲ್ಲ. ಮೈಸೂರು ಸಂಸ್ಥಾನವನ್ನೂ ಬಿಡುವುದಿಲ್ಲ, ಎಂಪಿ ಸ್ಥಾನವನ್ನೂ ಬಿಡುವುದಿಲ್ಲ,” ಎಂದು ವ್ಯಂಗ್ಯವಾಡಿದರು. “ಯತ್ನಾಳ್ ಮತ್ತು ಪ್ರತಾಪ್ ಉತ್ತರ ಪ್ರದೇಶದಲ್ಲಿ ಚುನಾವಣೆಗೆ ನಿಂತರೆ ಒಳ್ಳೆಯದು. ಪ್ರತಾಪ್ ಸೀತೆಯನ್ನು ನೋಡಲು ಅಯೋಧ್ಯೆಗೆ ಹೋಗಬಹುದು, ಆದರೆ ನಾವು ತಂದೆ-ತಾಯಿಯಲ್ಲೇ ಶ್ರೀರಾಮನನ್ನು, ಸೀತೆಯನ್ನು ಕಾಣುವ ಹಿಂದೂಗಳು,” ಎಂದರು. ಯತ್ನಾಳ್ ಹಾಗೂ ಪ್ರತಾಪ್ ಫೈರ್ ಅಲ್ಲ, ಬಿಜೆಪಿಯವರು ಕಿತ್ತು ಬಿಸಾಡಿರುವ ಪೈರು ನೀವು ಎಂದು ಲೇವಡಿ ಮಾಡಿದರು.
“ಬಿಜೆಪಿಯವರೇ ಎಷ್ಟು ದೇವಾಲಯಗಳನ್ನು ಉದ್ಧಾರ ಮಾಡಿದ್ದೀರಿ?”
ಹಿಂದೂ ಧರ್ಮದ ಬಗ್ಗೆ ಮಾತನಾಡುವ ಬಿಜೆಪಿ ನಾಯಕರನ್ನು ಟೀಕಿಸಿದ ಶಾಸಕ ಪ್ರದೀಪ್ ಈಶ್ವರ್, “ನಿಮಗಿಂತ ದೊಡ್ಡ ಹಿಂದೂ ಭಕ್ತರು, ಆರಾಧಕರು ನಾವು. ಯತ್ನಾಳ್ ಮತ್ತು ಪ್ರತಾಪ್ ಹಿಂದೂ ಧರ್ಮದ ಬಗ್ಗೆ ಇಷ್ಟು ಮಾತನಾಡುತ್ತಾರೆ, ಆದರೆ ಎಷ್ಟು ಹಿಂದೂ ದೇವಾಲಯಗಳನ್ನು ಉದ್ಧಾರ ಮಾಡಿದ್ದಾರೆ? ಅವರು ಫೈರ್ ಅಲ್ಲ, ಬಿಜೆಪಿಯವರು ಕಿತ್ತು ಬಿಸಾಡಿದ ಪೈರು,” ಎಂದು ಲೇವಡಿ ಮಾಡಿದರು.
“ನಾನು ಮಾತನಾಡಿದರೆ, ಲಕ್ಷ್ಮಣ್ ಮಾತನಾಡಿದರೆ ಪ್ರತಾಪ್ ಸಿಂಹ ಸ್ಟೇ ತರುತ್ತಾರೆ. ಯಾರೂ ನಿಮ್ಮನ್ನು ಬಯ್ಯಬಾರದು, ಆದರೆ ನೀವು ಯಾರನ್ನು ಬೇಕಾದರೂ ಬಯ್ಯಬಹುದಾ? ನಾನು ಮಾತನಾಡಿದರೆ ಮೂರನೇ ಮಾನನಷ್ಟ ಕೇಸ್ ಹಾಕುತ್ತಾರೆ,” ಎಂದು ಶಾಸಕ ಪ್ರದೀಪ್ ಈಶ್ವರ್ ಕಿಡಿಕಾರಿದರು.