ನಿವೃತ್ತ ಡಿಜಿಪಿ ಓಂ ಪ್ರಕಾಶ್ ಕೊಲೆ ಪ್ರಕರಣ: ಸಿಸಿಬಿ ತನಿಖೆಯಲ್ಲಿ ಭೀಕರ ಸತ್ಯ ಬಿಚ್ಚಿಟ್ಟ ಪಲ್ಲವಿ

29 (8)

ಬೆಂಗಳೂರು: ನಿವೃತ್ತ ಡಿಜಿಪಿ ಓಂ ಪ್ರಕಾಶ್ ಕೊಲೆ ಪ್ರಕರಣದಲ್ಲಿ ಸಿಸಿಬಿ ಪೊಲೀಸರ ತನಿಖೆ ವೇಳೆ ಆಘಾತಕಾರಿ ಮಾಹಿತಿಗಳು ಬೆಳಕಿಗೆ ಬಂದಿವೆ. ಓಂ ಪ್ರಕಾಶ್ ತಮ್ಮ ಕೊನೆಯ 20-25 ನಿಮಿಷಗಳನ್ನು ರಕ್ತದ ಮಡುವಿನಲ್ಲಿ ನರಳಾಡುತ್ತಾ ಕಳೆದು, ಜೀವ ಬಿಟ್ಟಿದ್ದಾರೆ.

ತನಿಖೆಯಿಂದ ಬಯಲಾದ ವಿವರಗಳ ಪ್ರಕಾರ, ಓಂ ಪ್ರಕಾಶ್ ಅವರ ಪತ್ನಿ ಪಲ್ಲವಿ ಚಾಕು ಮತ್ತು ಗಾಜಿನ ಬಾಟಲಿಯಿಂದ ಚುಚ್ಚಿ ಭೀಕರವಾಗಿ ಹಲ್ಲೆ ಮಾಡಿದ್ದಾರೆ. ಈ ದಾಳಿಯಿಂದ ಓಂ ಪ್ರಕಾಶ್ ದೇಹದ ಹಲವೆಡೆ ಗಾಯಗೊಂಡು ತೀವ್ರ ರಕ್ತಸ್ರಾವಕ್ಕೊಳಗಾಗಿದ್ದರು. ರಕ್ತದ ಮಡುವಿನಲ್ಲಿ ಒದ್ದಾಡುತ್ತಿರುವಾಗ, ಪಲ್ಲವಿ ರಕ್ತದ ಮೇಲೆ ಹಾರ್ಪಿಕ್ ಸುರಿದಿದ್ದಾರೆ. ಇದರಿಂದ ಓಂ ಪ್ರಕಾಶ್ ತೀವ್ರ ಉರಿಯಿಂದ ಮತ್ತಷ್ಟು ನರಳಾಡಿದ್ದಾರೆ.

ಅಷ್ಟಕ್ಕೇ ನಿಲ್ಲದೇ, ಪಲ್ಲವಿ ಖಾರದ ಪುಡಿಯನ್ನು ಎರಚಿದ್ದಾರೆ. ನಂತರ, ಓಂ ಪ್ರಕಾಶ್ ಅವರ ಮೃತದೇಹವನ್ನು ಬ್ಲಾಂಕೆಟ್‌ನಲ್ಲಿ ಸುತ್ತಿದ್ದಾರೆ. ಕೊಲೆಯ ನಂತರ ಮನೆಯಾದ್ಯಂತ ರಕ್ತಸಿಕ್ತವಾಗಿತ್ತು. ಪೊಲೀಸರು ಮನೆಯ ಮೂರು-ನಾಲ್ಕು ಕೊಠಡಿಗಳಲ್ಲಿ ಪಲ್ಲವಿಯ ಹೆಜ್ಜೆ ಗುರುತುಗಳನ್ನು ಮತ್ತು ಬ್ಲಾಂಕೆಟ್‌ಗಳಲ್ಲಿ ರಕ್ತದ ಕಲೆಗಳನ್ನು ಪತ್ತೆ ಮಾಡಿದ್ದಾರೆ. ದಿಕ್ಕು ತೋಚದೆ ಪಲ್ಲವಿ ಮನೆಯಾದ್ಯಂತ ಓಡಾಡಿದ್ದಾರೆ ಎಂಬುದು ತನಿಖೆಯಿಂದ ತಿಳಿದುಬಂದಿದೆ.

ಸಿಸಿಬಿ ಪೊಲೀಸರು ಓಂ ಪ್ರಕಾಶ್ ಕೊಲೆ ಸಂಬಂಧ ಪಲ್ಲವಿಯನ್ನು ಮತ್ತಷ್ಟು ವಿಚಾರಣೆಗೊಳಪಡಿಸುತ್ತಿದ್ದಾರೆ. ಪಲ್ಲವಿಯ ಬೆರಳಚ್ಚು (ಫಿಂಗರ್‌ಪ್ರಿಂಟ್) ತೆಗೆದುಕೊಂಡು ಪರಿಶೀಲನೆ ನಡೆಸಲಾಗುತ್ತಿದೆ. ಆದರೆ, ಕೆಲವು ಸ್ಥಳಗಳಲ್ಲಿ ಎರಡು-ಮೂರು ಬಾರಿ ಬೆರಳಚ್ಚುಗಳು ಕಂಡುಬಂದಿರುವ ಕಾರಣ, ಅವು ಅಸ್ಪಷ್ಟವಾಗಿವೆ. ಸದ್ಯ, ಬೆರಳಚ್ಚುಗಳ ಪರಿಶೀಲನೆಗಾಗಿ ಎಫ್‌ಎಸ್‌ಎಲ್ (ಫಾರೆನ್ಸಿಕ್ ಸೈನ್ಸ್ ಲ್ಯಾಬ್)ಗೆ ಕಳುಹಿಸಲಾಗಿದೆ.

ಸಿಸಿಬಿ ಪೊಲೀಸರು ಓಂ ಪ್ರಕಾಶ್ ಕೊಲೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ್ದು, ಎಲ್ಲ ಸಾಕ್ಷ್ಯಗಳನ್ನು ಸಂಗ್ರಹಿಸಿ ಸತ್ಯವನ್ನು ಬಯಲಿಗೆಳೆಯಲು ಪ್ರಯತ್ನಿಸುತ್ತಿದ್ದಾರೆ. 

Exit mobile version