ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಡೀಪ್‌ಫೇಕ್ ವಿಡಿಯೋಗಳನ್ನು ಬಳಸಿ ಷೇರು ಮಾರುಕಟ್ಟೆ ಹೂಡಿಕೆಯ ಆಮಿಷವೊಡ್ದಿ ವಂಚಕರು ಬೆಳಗಾವಿಯ 76 ವರ್ಷದ ಹಿರಿಯ ನಾಗರಿಕರೊಬ್ಬರಿಂದ 7.9 ಲಕ್ಷ ರೂಪಾಯಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ಘಟನೆಯ ವಿವರ :
ಬೆಳಗಾವಿಯ ಪ್ರಕಾಶ ಗುಬ್ಬಿ (76) ಎಂಬ ಹಿರಿಯ ನಾಗರಿಕರು ಈ ವಂಚನೆಗೆ ಒಳಗಾಗಿದ್ದಾರೆ. ವಂಚಕರು ನಿರ್ಮಲಾ ಸೀತಾರಾಮನ್ ಅವರ ಡೀಪ್‌ಫೇಕ್ ವಿಡಿಯೋ ಬಳಸಿ, “ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಕಡಿಮೆ ಅವಧಿಯಲ್ಲಿ ಅಧಿಕ ಲಾಭ ಗಳಿಸಿ” ಎಂಬ ಆಮಿಷವನ್ನು ಹಾಕಿದ್ದರು.
ಪ್ರಕಾಶ ಗುಬ್ಬಿ ಜಾಹೀರಾತಿನ ಲಿಂಕ್‌ನಲ್ಲಿ ತಮ್ಮ ವಿವರಗಳನ್ನು ನಮೂದಿಸಿದ ನಂತರ ವಂಚಕರು ನೇರವಾಗಿ ಫೋನ್ ಮಾಡಿ ಹೂಡಿಕೆಗೆ ಪ್ರೇರೇಪಿಸಿದ್ದಾರೆ. ಮೊದಲು ಫೋನ್‌ಪೇ ಮೂಲಕ ₹16,500 ಹಣ ತೆಗೆದುಕೊಂಡು ಸಣ್ಣ ಲಾಭವನ್ನು ತೋರಿಸಿ ನಂತರ RTGS ಮೂಲಕ ಒಟ್ಟು ₹7.9 ಲಕ್ಷ ಹಣವನ್ನು ವರ್ಗಾಯಿಸಿಕೊಂಡಿದ್ದಾರೆ.
ಹಣ ಹಿಂದಿರುಗಿಸುವಂತೆ ಕೇಳಿದಾಗ, “ಇನ್ನಷ್ಟು ಹಣ ಹೂಡಿಕೆ ಮಾಡಿದರೆ ಮಾತ್ರ ಮೂಲ ಹಣ ಮತ್ತು ಲಾಭ ಬರುತ್ತದೆ” ಎಂದು ಹೇಳಿ ಮತ್ತಷ್ಟು ವಂಚಿಸಲು ಯತ್ನಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪ್ರಕರಣ ದಾಖಲು :
ಈ ಸಂಬಂಧ ಬೆಳಗಾವಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳಾದ: ಆದರ್ಶ ಆನಂದ (ಕೊಲ್ಲಾಪುರ), ದಾಮೋದರ್ (ಬುಲ್ದಾಣಾ, ಮಹಾರಾಷ್ಟ್ರ) ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.
ಎಚ್ಚರಿಕೆ :
ಡೀಪ್‌ಫೇಕ್ ತಂತ್ರಜ್ಞಾನ ಬಳಸಿ ಪ್ರಮುಖ ವ್ಯಕ್ತಿಗಳ ಹೆಸರಿನಲ್ಲಿ ಹೂಡಿಕೆ, ಲಾಭ, ಲಾಟರಿ ಆಮಿಷಗಳು ಹೆಚ್ಚಾಗುತ್ತಿವೆ. ಯಾವುದೇ ಅನುಮಾನಾಸ್ಪದ ಲಿಂಕ್ ಅಥವಾ ಕರೆ ಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.
