ಒಂದೆಡೆ ಸಂಸಾರ ಆರಂಭಿಸಿದ ಐದೇ ತಿಂಗಳಿಗೆ ನವವಿವಾಹಿತೆ ನಿಗೂಢವಾಗಿ ಸಾವನ್ನಪ್ಪಿದ್ದರೆ, ಮತ್ತೊಂದೆಡೆ ಪ್ರೀತಿಸಿದವಳ ಕಿರುಕುಳಕ್ಕೆ ಮನನೊಂದು ಯುವಕನೊಬ್ಬ ಪ್ರಾಣ ಬಿಟ್ಟಿದ್ದಾನೆ. ಈ ಎರಡೂ ಪ್ರಕರಣಗಳು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ದಟ್ಟ ಸಂಶಯವನ್ನು ಹುಟ್ಟುಹಾಕಿವೆ.
ಚಿಕ್ಕಬಳ್ಳಾಪುರ: ಪತಿಯ ಅನುಮಾನಕ್ಕೆ ರೂಪಾ ಬಲಿ?
ಚಿಕ್ಕಬಳ್ಳಾಪುರ ತಾಲೂಕಿನ ಹೊನ್ನೇನಹಳ್ಳಿಯಲ್ಲಿ ರೂಪಾ (30) ಎಂಬ ನವವಿವಾಹಿತೆ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕಳೆದ 5 ತಿಂಗಳ ಹಿಂದೆಯಷ್ಟೇ ಮುನಿರಾಜು ಎಂಬುವವರ ಜೊತೆ ಇವರ ವಿವಾಹವಾಗಿತ್ತು. ಆದರೆ, ಪತಿ ಮುನಿರಾಜು ಸದಾ ಅನುಮಾನ ಪಡುತ್ತಿದ್ದ ಎನ್ನಲಾಗಿದ್ದು, ಇದೇ ಕಾರಣಕ್ಕೆ ಆತನೇ ಕೊಲೆ ಮಾಡಿ ನೇಣು ಹಾಕಿದ್ದಾನೆ ಎಂದು ರೂಪಾ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಜಿಲ್ಲಾಸ್ಪತ್ರೆಯ ಶವಾಗಾರದ ಮುಂದೆ ರೂಪಾ ಸಂಬಂಧಿಕರು ಪತಿಯ ಮನೆಯವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಮಾಗಡಿ: ಡೆತ್‌ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ
ಇತ್ತ ಮಾಗಡಿ ತಾಲೂಕಿನ ಮಲ್ಲಿಕುಂಟೆಯ ತೋಟದ ಮನೆಯಲ್ಲಿ ರಾಜೇಶ್ (35) ಎಂಬ ಯುವಕ ನೇಣಿಗೆ ಶರಣಾಗಿದ್ದಾನೆ. “ಪ್ರೀತಿಸಿದವಳ ಕಿರುಕುಳ ತಾಳಲಾರದೆ ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ” ಎಂದು ಡೆತ್‌ನೋಟ್‌ನಲ್ಲಿ ಬರೆಯಲಾಗಿದೆ. ಆದರೆ, ರಾಜೇಶ್ ಪೋಷಕರು ಇದನ್ನು ಕೊಲೆ ಎಂದು ಶಂಕಿಸಿದ್ದಾರೆ. ಯಾರೋ ರಾಜೇಶ್‌ನನ್ನು ಕೊಂದು ಆತ್ಮಹತ್ಯೆ ಎಂದು ಬಿಂಬಿಸಲು ಡೆತ್‌ನೋಟ್ ಸೃಷ್ಟಿಸಿದ್ದಾರೆ ಎಂಬುದು ಪೋಷಕರ ವಾದ. ಕುದೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
