ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಕುಲವನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಟಿಪ್ಪರ್ ಲಾರಿಯೊಂದು ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಸ್ಕೂಟಿಯಲ್ಲಿದ್ದ ಗಂಡರಗೋಳಿಪುರ ಗ್ರಾಮದ 17 ವರ್ಷದ ಬಾಲಕಿ ದಿವ್ಯಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ಬಾಲಕಿಯರಾದ ಭೂಮಿಕಾ (17) ಮತ್ತು ನಿರೀಕ್ಷಾ (18) ಗಂಭೀರವಾಗಿ ಗಾಯಗೊಂಡಿದ್ದಾರೆ.
ಈ ಘಟನೆ ತುಮಕೂರಿನ ಮಂದರ್ತಿ ಬೆಟ್ಟಕ್ಕೆ ಭೇಟಿ ನೀಡಿ ವಾಪಸ್ ಬರುವ ವೇಳೆಯಲ್ಲಿ ಸಂಭವಿಸಿದೆ. ಮೂವರು ಬಾಲಕಿಯರು ಸ್ಕೂಟಿಯಲ್ಲಿ ಪ್ರಯಾಣಿಸುತ್ತಿದ್ದಾಗ, ಅತಿವೇಗದಿಂದ ಬಂದ ಟಿಪ್ಪರ್ ಲಾರಿಯು ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಲಾರಿ ಚಾಲಕನ ನಿರ್ಲಕ್ಷ್ಯ ಮತ್ತು ಅತಿವೇಗದ ಚಾಲನೆಯೇ ಈ ಅಪಘಾತಕ್ಕೆ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ.
ಗಾಯಗೊಂಡ ಭೂಮಿಕಾ ಮತ್ತು ನಿರೀಕ್ಷಾರನ್ನು ತಕ್ಷಣವೇ ತುಮಕೂರಿನ ಸಿದ್ದಾರ್ಥ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತದ ಬಳಿಕ ಲಾರಿ ಸಮೇತ ಲಾರಿಚಾಲಕನನ್ನು ನೆಲಮಂಗಲ ಸಂಚಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.