ಬೆಂಗಳೂರು: ಕಲ್ಯಾಣ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ (ಕೆಕೆಆರ್‌ಟಿಸಿ) ಬಸ್‌ಗೆ ಕಾರು ಹಿಂಬದಿಯಿಂದ ಡಿಕ್ಕಿಹೊಡೆದ ಪರಿಣಾಮ ಒಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನೆಲಮಂಗಲ ತಾಲೂಕಿನ ತೊಣಚಿನಕುಪ್ಪೆ ಪ್ರವಾಸಿ ಡಾಬಾದ ಬಳಿ ನಡೆದಿದೆ.
ವೇಗವಾಗಿ ಬಂದ ಕಾರು ಬಸ್‌ಗೆ ಡಿಕ್ಕಿಹೊಡೆದ ರಭಸಕ್ಕೆ ಕಾರಿನಲ್ಲಿದ್ದ ಓಬಳಾರೆಡ್ಡಿ (35) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಕಾರಿನಲ್ಲಿದ್ದ ಸುನಿಲ್ ಮತ್ತು ದಿವ್ಯ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ದುರ್ಘಟನೆ ರಾಷ್ಟ್ರೀಯ ಹೆದ್ದಾರಿ 48ರ ತುಮಕೂರು-ಬೆಂಗಳೂರು ಮಾರ್ಗದಲ್ಲಿ ಸಂಭವಿಸಿದೆ. ನೆಲಮಂಗಲ ಸಂಚಾರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬಾಗಲಕೋಟೆಯಲ್ಲಿ ಅಪರಿಚಿತ ವಾಹನ ಡಿಕ್ಕಿ: ತಂದೆ-ಮಗಳ ಸ್ಥಳದಲ್ಲೇ ಸಾವು
ಬಾಗಲಕೋಟೆ: ಅಪರಿಚಿತ ವಾಹನವೊಂದು ಡಿಕ್ಕಿಹೊಡೆದ ಪರಿಣಾಮ ತಂದೆ ಮತ್ತು ಮಗಳು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕುಳಗೇರಿ ಕ್ರಾಸ್ ಬಳಿ ನಡೆದಿದೆ.
ಬಸವರಾಜ್ (26) ಮತ್ತು ಅವರ ಮಗಳು ಹುಲಿಗೆಮ್ಮ (3) ಮೃತ ದುರ್ದೈವಿಗಳು. ಇವರು ಎಸ್.ಎನ್. ತಿಮ್ಮಾಪೂರ ಗ್ರಾಮದ ನಿವಾಸಿಗಳಾಗಿದ್ದು, ಹಳಗೇರಿ ಗ್ರಾಮದ ಆಂಜನೇಯ ದೇವಸ್ಥಾನದ ದರ್ಶನಕ್ಕೆ ತೆರಳಿದ್ದರು ಎಂದು ಮಾಹಿತಿ ಲಭ್ಯವಾಗಿದೆ. ಬಾದಾಮಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.