ಬೆಂಗಳೂರು: ರಾಜ್ಯದಲ್ಲಿ ಬೆಲೆ ಏರಿಕೆ ಬಿಸಿ ಜನರನ್ನು ಬಿಟ್ಟುಬಿಡದೆ ಕಾಡುತ್ತಿದೆ. ಇನ್ನು ವಾಹನ ಸವಾರರಿಗೆ ಬಿಗ್ ಶಾಕ್ ಎನ್ನುವಂತೆ, ಇಂದು ಮಧ್ಯರಾತ್ರಿಯಿಂದಲೇ ನೆಲಮಂಗಲ-ಹಾಸನ ರಾಷ್ಟ್ರೀಯ ಹೆದ್ದಾರಿ (NH-75) ಟೋಲ್ ದರ ಏರಿಕೆಯಾಗಲಿದೆ. ಈ ಕುರಿತು ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮಾಹಿತಿ ನೀಡಿದ್ದು, ಸೆಪ್ಟೆಂಬರ್ 1ರ ಮಧ್ಯರಾತ್ರಿಯಿಂದ ಟೋಲ್ ದರ ಏರಿಕೆ ಜಾರಿಗೆ ಬರಲಿದೆ.
ನೆಲಮಂಗಲ-ಹಾಸನ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ದರವನ್ನು ಶೇ.3 ರಿಂದ ಶೇ.5ರಷ್ಟು ಹೆಚ್ಚಿಸಲಾಗಿದೆ. ಈ ಏರಿಕೆಯಿಂದ ಲಘು ವಾಹನಗಳಿಗೆ (ಕಾರುಗಳು, ಜೀಪ್‌ಗಳು) 10 ರಿಂದ 15 ರೂಪಾಯಿಗಳಷ್ಟು ಹೆಚ್ಚುವರಿ ಶುಲ್ಕ ವಿಧಿಸಲಾಗುವುದು. ಭಾರೀ ವಾಹನಗಳಾದ ಲಾರಿಗಳು ಮತ್ತು ಬಸ್‌ಗಳಿಗೆ 50 ರಿಂದ 100 ರೂಪಾಯಿಗಳಷ್ಟು ಟೋಲ್ ಶುಲ್ಕ ಹೆಚ್ಚಳವಾಗಲಿದೆ.
ಈ ದರ ಏರಿಕೆಯಿಂದಾಗಿ ವಾಹನ ಸವಾರರು, ವಿಶೇಷವಾಗಿ ಈ ಮಾರ್ಗವನ್ನು ದೈನಂದಿನ ಸಂಚಾರಕ್ಕೆ ಬಳಸುವವರು ಆರ್ಥಿಕ ಒತ್ತಡವನ್ನು ಎದುರಿಸಬೇಕಾಗಬಹುದು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ರಸ್ತೆ ನಿರ್ವಹಣೆ ಮತ್ತು ಮೂಲಸೌಕರ್ಯ ಸುಧಾರಣೆಗಾಗಿ ಈ ದರ ಏರಿಕೆ ಅಗತ್ಯ ಎಂದು ತಿಳಿಸಿದೆ.
ಟೋಲ್ ದರ ಏರಿಕೆಯ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದ್ದು, ಸಾರ್ವಜನಿಕರು ಮತ್ತು ವಾಹನ ಚಾಲಕರು ಈ ಏರಿಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಮಾರ್ಗವು ಬೆಂಗಳೂರು, ಹಾಸನ, ಮಂಗಳೂರು ಮತ್ತು ಕರಾವಳಿ ಕರ್ನಾಟಕಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಹೆದ್ದಾರಿಯಾಗಿದ್ದು, ದರ ಏರಿಕೆಯಿಂದ ಸರಕು ಸಾಗಣೆ ಮತ್ತು ಪ್ರಯಾಣಿಕರ ವೆಚ್ಚದ ಮೇಲೆ ಪರಿಣಾಮ ಬೀರಲಿದೆ.