ಸಿಗರೇಟ್ ಮೇಲಿನ ತೆರಿಗೆ ಏರಿಕೆಯಿಂದ ಬೆಲೆ ಗಗನಕ್ಕೇರಿದ ನಂತರ ಕಳಪೆ ಗುಣಮಟ್ಟದ ನಕಲಿ ಸಿಗರೇಟ್‌ಗಳ ಹೊಸ ದಂಧೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಇಂತಹ ನಕಲಿ ಸಿಗರೇಟ್‌ಗಳು ಆರೋಗ್ಯಕ್ಕೆ ತೀವ್ರ ಅಪಾಯ ತರುತ್ತಿವೆ ಎಂದು ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.
ನೆಲಮಂಗಲ ಆರೋಗ್ಯ ಆಡಳಿತಾಧಿಕಾರಿ ಡಾ. ಪದ್ಮಿನಿ ನೇತೃತ್ವದಲ್ಲಿ ನಡೆದ ದಿಢೀರ್ ದಾಳಿಯಲ್ಲಿ ಈ ಹೊಸ ದಂಧೆ ಬಯಲಾಗಿದೆ. ಅನುಮಾನಾಸ್ಪದ ಹೋಲ್ಸೇಲ್ ಅಂಗಡಿಗಳ ಮೇಲೆ ದಾಳಿ ನಡೆಸಿದ ತಂಡವು ಹಲವಾರು ಬ್ರ್ಯಾಂಡ್‌ಗಳ ಹೆಸರಿನಲ್ಲಿ ಮಾರಾಟವಾಗುತ್ತಿದ್ದ ನಕಲಿ ಸಿಗರೇಟ್ ಬಂಡಲ್‌ಗಳನ್ನು ವಶಪಡಿಸಿಕೊಂಡಿದೆ.
ಏನಿದೆ ಈ ನಕಲಿ ಸಿಗರೇಟ್‌ಗಳಲ್ಲಿ?
- ಖ್ಯಾತ ಬ್ರ್ಯಾಂಡ್‌ಗಳ ಹೆಸರು ಮತ್ತು ಪ್ಯಾಕೇಟ್ ಡಿಸೈನ್ ಅನ್ನು ಅನುಕರಿಸಿ ತಯಾರಿಸಲಾಗಿದೆ.
- ರಾಸಾಯನಿಕಗಳು, ನಿಷಿದ್ಧ ವಸ್ತುಗಳು ಮತ್ತು ಕಡಿಮೆ ಗುಣಮಟ್ಟದ ತಂಬಾಕು ಬಳಸಿರುವ ಸಾಧ್ಯತೆ.
- ಆರೋಗ್ಯ ಇಲಾಖೆಯ ಪ್ರಕಾರ ಇಂತಹ ಸಿಗರೇಟ್ ಸೇವಿಸಿದರೆ ತೀವ್ರ ಉಸಿರಾಟದ ಸಮಸ್ಯೆ, ಕ್ಯಾನ್ಸರ್, ಹೃದಯರೋಗದ ಅಪಾಯ ಭಾರಿ ಹೆಚ್ಚಾಗುತ್ತದೆ.
- “ಧಮ್ ಹೊಡೆದ್ರೆ ಡೈರೆಕ್ಟ್ ಯಮಲೋಕ” ಎಂಬ ತೀವ್ರ ಎಚ್ಚರಿಕೆಯನ್ನು ಆರೋಗ್ಯಾಧಿಕಾರಿಗಳು ನೀಡಿದ್ದಾರೆ.
ದಾಳಿಯ ವಿವರಗಳು :
ಆರೋಗ್ಯ ಇಲಾಖೆಯ ತಂಡವು ನೆಲಮಂಗಲದ ಹಲವು ಹೋಲ್ಸೇಲ್ ಅಂಗಡಿಗಳ ಮೇಲೆ ದಾಳಿ ನಡೆಸಿತು. ಅಲ್ಲಿಂದ ಸಾವಿರಾರು ನಕಲಿ ಸಿಗರೇಟ್ ಪ್ಯಾಕೆಟ್‌ಗಳನ್ನು ವಶಪಡಿಸಿಕೊಳ್ಳಲಾಯಿತು. ಅನುಮಾನಾಸ್ಪದ ಅಂಗಡಿಗಳಿಗೆ ತಾತ್ಕಾಲಿಕವಾಗಿ ಬೀಗ ಹಾಕಲಾಗಿದೆ. ವಶಪಡಿಸಿಕೊಂಡ ಸಿಗರೇಟ್‌ಗಳನ್ನು ಪರೀಕ್ಷೆಗೆ ಲ್ಯಾಬ್‌ಗೆ ಕಳುಹಿಸಲಾಗಿದ್ದು, ತನಿಖೆಯ ನಂತರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಗ್ಯ ಇಲಾಖೆಯ ಎಚ್ಚರಿಕೆ
ಸಿಗರೇಟ್ ಬೆಲೆ ಏರಿಕೆಯ ನಂತರ ಸಸ್ತು ನಕಲಿ ಸಿಗರೇಟ್‌ಗಳ ಮಾರಾಟ ಹೆಚ್ಚಾಗುತ್ತಿದೆ. ಇವುಗಳನ್ನು ಖರೀದಿಸುವ ಮುನ್ನ ಪ್ಯಾಕೇಟ್‌ನ ಮೇಲಿನ ಲೈಸೆನ್ಸ್, ಬ್ಯಾಚ್ ಸಂಖ್ಯೆ, ತಯಾರಿಕೆಯ ದಿನಾಂಕ ಮತ್ತು ತೆರಿಗೆ ಸೀಲ್‌ಗಳನ್ನು ಖಚಿತಪಡಿಸಿಕೊಳ್ಳಿ ಎಂದು ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ಮನವಿ ಮಾಡಿದೆ.