ಬೆಂಗಳೂರು, ಏಪ್ರಿಲ್ 19: ನಮ್ಮ ಮೆಟ್ರೋ (Namma Metro) ದೈನಂದಿನ ಪ್ರಯಾಣಿಕರ ಸಂಖ್ಯೆಯಲ್ಲಿ ದಾಖಲೆ ಬರೆದಿದ್ದು, ಎಲ್ಲರ ಗಮನ ಸೆಳೆದಿದೆ. ಟಿಕೆಟ್ ದರ ಗಣನೀಯವಾಗಿ ಏರಿಕೆಯಾದ ಬಳಿಕ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆಯಾಗಿತ್ತು ಎಂಬ ವರದಿಗಳಿದ್ದವು. ಆದರೆ, ಈಗ ಬೆಂಗಳೂರಿನ ಟ್ರಾಫಿಕ್ ಜಂಜಾಟದಿಂದ ಬೇಸತ್ತ ಜನರು ಮತ್ತೆ ಮೆಟ್ರೋವನ್ನೇ ಆಶ್ರಯಿಸುತ್ತಿದ್ದಾರೆ. ಏಪ್ರಿಲ್ 17 ರಂದು ಮೆಟ್ರೋದಲ್ಲಿ ದಾಖಲೆಯ 9,08,153 ಪ್ರಯಾಣಿಕರು ಸಂಚರಿಸಿದ್ದಾರೆ ಎಂದು ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ (BMRCL) ತಿಳಿಸಿದೆ.
ಬಿಎಂಆರ್ಸಿಎಲ್ ವರದಿಯ ಪ್ರಕಾರ, ಪರ್ಪಲ್ ಲೈನ್ (ಲೈನ್ 1) ನಲ್ಲಿ 4,35,516 ಮಂದಿ ಮತ್ತು ಗ್ರೀನ್ ಲೈನ್ (ಲೈನ್ 2) ನಲ್ಲಿ 2,85,240 ಜನ ಪ್ರಯಾಣಿಸಿದ್ದಾರೆ. ಕೆಂಪೇಗೌಡ ನಿಲ್ದಾಣದಲ್ಲಿ 1,87,397 ಪ್ರಯಾಣಿಕರು ಮಾರ್ಗ ಬದಲಾಯಿಸಿದ್ದಾರೆ. ಟಿಕೆಟ್ ದರ ಏರಿಕೆಯಿಂದಾಗಿ ಸಾರ್ವಜನಿಕರಲ್ಲಿ ಆಕ್ರೋಶ ವ್ಯಕ್ತವಾಗಿತ್ತಾದರೂ, ಬೆಂಗಳೂರಿನ ರಸ್ತೆ ಟ್ರಾಫಿಕ್ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಮೆಟ್ರೋವನ್ನೇ ಆದ್ಯತೆಯ ಸಾರಿಗೆಯಾಗಿ ಆಯ್ಕೆ ಮಾಡುತ್ತಿದ್ದಾರೆ.
2025ರ ಫೆಬ್ರವರಿಯಲ್ಲಿ ಬಿಎಂಆರ್ಸಿಎಲ್ ಟಿಕೆಟ್ ದರವನ್ನು ಹೆಚ್ಚಿಸಿತ್ತು. ಗರಿಷ್ಠ ಟಿಕೆಟ್ ಬೆಲೆಯನ್ನು 60 ರೂಪಾಯಿಯಿಂದ 90 ರೂಪಾಯಿಗೆ ಏರಿಸಲಾಗಿತ್ತು. ಸ್ಮಾರ್ಟ್ ಕಾರ್ಡ್‌ನ ಕನಿಷ್ಠ ಬ್ಯಾಲೆನ್ಸ್ ಅವಶ್ಯಕತೆಯನ್ನು 50 ರೂಪಾಯಿಯಿಂದ 90 ರೂಪಾಯಿಗೆ ಹೆಚ್ಚಿಸಲಾಗಿತ್ತು. ಈ ಶೇ 50–90ರಷ್ಟು ದರ ಏರಿಕೆಗೆ ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇದರ ಪರಿಣಾಮವಾಗಿ, ಆರಂಭದಲ್ಲಿ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಕೊಂಚ ಇಳಿಕೆ ಕಂಡುಬಂದಿತ್ತು.
ದರ ಏರಿಕೆಯ ವಿರುದ್ಧ ಸಾರ್ವಜನಿಕ ಆಕ್ರೋಶದ ನಡುವೆ, ಕರ್ನಾಟಕ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಕೇಂದ್ರ ಸರ್ಕಾರವೇ ಈ ದರ ಏರಿಕೆಗೆ ಕಾರಣ ಎಂದು ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ, ಬಿಜೆಪಿ ನಾಯಕರು ಸಚಿವ ರಾಮಲಿಂಗಾ ರೆಡ್ಡಿ ಅವರು ಸಾರ್ವಜನಿಕರನ್ನು ದಾರಿತಪ್ಪಿಸಲು ತಪ್ಪು ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಟೀಕಿಸಿದ್ದರು.
ಈ ಎಲ್ಲ ವಿವಾದಗಳ ನಡುವೆಯೂ, ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಕ್ರಮೇಣ ಏರಿಕೆಯಾಗಿದೆ. ಈಗ ದೈನಂದಿನ ಪ್ರಯಾಣಿಕರ ಸಂಖ್ಯೆ ದಾಖಲೆಯ 9 ಲಕ್ಷ ಗಡಿ ದಾಟಿರುವುದು ನಮ್ಮ ಮೆಟ್ರೋಗೆ ಹೊಸ ಮೈಲಿಗಲ್ಲಾಗಿದೆ. ಬೆಂಗಳೂರಿನ ಜನರು ಮೆಟ್ರೋವನ್ನು ತಮ್ಮ ದೈನಂದಿನ ಸಂಚಾರಕ್ಕೆ ವಿಶ್ವಾಸಾರ್ಹ ಮತ್ತು ಅನುಕೂಲಕರ ಸಾರಿಗೆಯಾಗಿ ಸ್ವೀಕರಿಸಿರುವುದು ಈ ಅಂಕಿಅಂಶಗಳಿಂದ ಸ್ಪಷ್ಟವಾಗಿದೆ.