ಮೈಸೂರು: ಮೈಸೂರಿನ ಪಿರಿಯಾಪಟ್ಟಣ ತಾಲೂಕಿನ ಕಂಪಲಾಪುರದಲ್ಲಿ ಹನಿಟ್ರ್ಯಾಪ್ ಮಾಡಿ ತಲೆಮರೆಸಿಕೊಂಡಿದ್ದ ಯುವ ಜೋಡಿಯನ್ನು ಪೊಲೀಸರು ಕೇರಳದ ಕಣ್ಣೂರಿನ ಲಾಡ್ಜ್‌ನಲ್ಲಿ ಬಂಧಿಸಿದ್ದಾರೆ. ಸುಂದರ ಯುವತಿಯನ್ನು ಮುಂದಿಟ್ಟುಕೊಂಡು ವ್ಯಕ್ತಿಗಳನ್ನು ಮೋಹದ ಜಾಲಕ್ಕೆ ಬೀಳಿಸಿ ಹಣ ವಸೂಲಿ ಮಾಡುತ್ತಿದ್ದ ಈ ಜೋಡಿಯನ್ನು ಎಸ್‌ಪಿ ವಿಷ್ಣುವರ್ಧನ್‌ರ ಮಾರ್ಗದರ್ಶನದಲ್ಲಿ ಬೈಲಕುಪ್ಪೆ ಪೊಲೀಸರು ಬಂಧಿಸಿದ್ದಾರೆ.
ಕಂಪಲಾಪುರದ ಬಟ್ಟೆ ಅಂಗಡಿ ಮಾಲೀಕ ದಿನೇಶ್ ಕುಮಾರ್‌ನನ್ನು ಗುರಿಯಾಗಿಸಿಕೊಂಡು ಈ ತಂಡವು 10 ಲಕ್ಷ ರೂಪಾಯಿಗಳ ಬೇಡಿಕೆ ಇಟ್ಟಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಬೈಲಕುಪ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಾದ ಕವನ ಮತ್ತು ಸೈಫ್‌ರನ್ನು ಬಂಧಿಸಲಾಗಿದೆ. ಈ ಕೃತ್ಯದಲ್ಲಿ ಭಾಗಿಯಾಗಿದ್ದ ಪೊಲೀಸ್ ಕಾನ್ಸ್‌ಟೇಬಲ್ ಶಿವಣ್ಣನನ್ನು ಈಗಾಗಲೇ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.
ಕಳೆದ ಒಂದು ತಿಂಗಳಿಂದ ಪೊಲೀಸರ ಕಣ್ತಪ್ಪಿಸಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಬೈಲಕುಪ್ಪೆ ಪಿಎಸ್‌ಐ ರವಿಕುಮಾರ್, ಸಿಬ್ಬಂದಿಗಳಾದ ವಿಜಯ ಪವರ್, ಮುದ್ದುರಾಜ್, ಮತ್ತು ಮಹಿಳಾ ಪೊಲೀಸ್ ಪೇದೆ ಅಶ್ವಿತಾ ಅವರ ತಂಡವು ಕಾರ್ಯಾಚರಣೆ ನಡೆಸಿ ಬಂಧಿಸಿತು. ಸದ್ಯ, ಬೈಲಕುಪ್ಪೆ ಪೊಲೀಸರು ಆರೋಪಿಗಳನ್ನು ಕೃತ್ಯ ನಡೆದ ಸ್ಥಳಗಳಿಗೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ.