ಮೈಸೂರು ದಸರಾ ಉದ್ಘಾಟನೆ: ಬಾನು ಮುಷ್ತಾಕ್ ಆಯ್ಕೆ ತಡೆ ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ ಪ್ರತಾಪ್ ಸಿಂಹ

ಸರ್ಕಾರದ ನಿರ್ಧಾರಕ್ಕೆ ತಡೆ ಕೋರಿ ಹೈಕೋರ್ಟ್‌ಗೆ ಅರ್ಜಿಸಲ್ಲಿಸದ ಪ್ರತಾಪ್ ಸಿಂಹ!

111 (2)

ಬೆಂಗಳೂರು: ಮೈಸೂರು ದಸರಾ 2025ರ ಉದ್ಘಾಟನೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗ, ಉದ್ಘಾಟಕರ ಆಯ್ಕೆಯ ವಿಚಾರವಾಗಿ ವಿವಾದ ತಾರಕಕ್ಕೇರಿದೆ. ಬೂಕರ್‌ ಪ್ರಶಸ್ತಿ ಪುರಸ್ಕೃತ ಸಾಹಿತಿ ಬಾನು ಮುಷ್ತಾಕ್‌ರನ್ನು ಉದ್ಘಾಟಕರಾಗಿ ಆಯ್ಕೆ ಮಾಡಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಮಾಜಿ ಸಂಸದ ಪ್ರತಾಪ್ ಸಿಂಹ ಈ ಕ್ರಮವನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಸರ್ಕಾರದ ಈ ಏಕಪಕ್ಷೀಯ ನಿರ್ಧಾರಕ್ಕೆ ತಡೆ ನೀಡುವಂತೆ ಅವರು ಕೋರಿದ್ದಾರೆ.

ಮೈಸೂರು ದಸರಾ 2025ರ ಉದ್ಘಾಟನೆ: ಬಾನು ಮುಷ್ತಾಕ್ ಆಯ್ಕೆ!

ರಾಜ್ಯ ಸರ್ಕಾರವು ಬಾನು ಮುಷ್ತಾಕ್‌ರನ್ನು ಮೈಸೂರು ದಸರಾ ಉದ್ಘಾಟಕರಾಗಿ ಘೋಷಿಸಿದಾಗಿನಿಂದಲೂ, ಈ ಆಯ್ಕೆಯ ವಿರುದ್ಧ ತೀವ್ರ ಆಕ್ಷೇಪಗಳು ಕೇಳಿಬಂದಿವೆ. ಮಾಜಿ ಸಂಸದ ಪ್ರತಾಪ್ ಸಿಂಹ, ಬಾನು ಮುಷ್ತಾಕ್‌ರನ್ನು “ಹಿಂದೂ ವಿರೋಧಿ ಮತ್ತು ಕನ್ನಡ ವಿರೋಧಿ” ಭಾವನೆ ಹೊಂದಿರುವವರು ಎಂದು ಆರೋಪಿಸಿ, ಈ ಆಯ್ಕೆಯು ದಸರಾ ಹಬ್ಬದ ಸಂಪ್ರದಾಯಕ್ಕೆ ವಿರುದ್ಧವಾಗಿದೆ ಎಂದಿದ್ದಾರೆ. ದಸರಾ ಉದ್ಘಾಟನೆಯ ಸಂದರ್ಭದಲ್ಲಿ ಚಾಮುಂಡೇಶ್ವರಿ ಪ್ರತಿಮೆಗೆ ಪುಷ್ಪಾರ್ಚನೆ, ವೇದ ಮಂತ್ರಗಳ ಜಪ ಮತ್ತು ಧಾರ್ಮಿಕ ಆಚರಣೆಗಳು ಸಂಪ್ರದಾಯದ ಭಾಗವಾಗಿದ್ದು, ಈ ಆಯ್ಕೆಯಿಂದ ಹಿಂದೂ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ಅವರು ವಾದಿಸಿದ್ದಾರೆ.

ಹಾಸನದ ಅಮೀರ್ ಮೊಹಲ್ಲಾದಲ್ಲಿರುವ ಬಾನು ಮುಷ್ತಾಕ್‌ರ ನಿವಾಸಕ್ಕೆ ಜಿಲ್ಲಾಡಳಿತವು ಇತ್ತೀಚೆಗೆ ಭೇಟಿ ನೀಡಿ, ಮೈಸೂರು ದಸರಾ ಉದ್ಘಾಟನೆಗೆ ಅಧಿಕೃತ ಆಹ್ವಾನವನ್ನು ನೀಡಿತ್ತು. ಆದರೆ, ಈ ನಿರ್ಧಾರಕ್ಕೆ ಮೈಸೂರಿನ ರಾಜಮನೆತನದವರು ಸೇರಿದಂತೆ ಹಲವು ಹಿಂದೂಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ರಾಷ್ಟ್ರ ರಕ್ಷಣಾ ಸೇನೆಯ ಕಾರ್ಯಕರ್ತರು ಬಾನು ಮುಷ್ತಾಕ್‌ರನ್ನು ಭೇಟಿಯಾಗಿ, ಆಹ್ವಾನವನ್ನು ತಿರಸ್ಕರಿಸುವಂತೆ ಮನವಿ ಮಾಡಿದ್ದರು. ಆದಾಗ್ಯೂ, ಬಾನು ಮುಷ್ತಾಕ್ ಆಹ್ವಾನವನ್ನು ಸ್ವೀಕರಿಸಿ, ಜಿಲ್ಲಾಡಳಿತಕ್ಕೆ ಧನ್ಯವಾದ ತಿಳಿಸಿದ್ದಾರೆ. “ದಸರಾ ಎಲ್ಲರ ಮನೆಯ ಹಬ್ಬ” ಎಂದು ಕೊಂಡಾಡಿದ ಅವರು, ತಮ್ಮ ಆಯ್ಕೆಗೆ ಸಂತಸ ವ್ಯಕ್ತಪಡಿಸಿದ್ದಾರೆ.

ಹೈಕೋರ್ಟ್‌ಗೆ ಅರ್ಜಿಸಲ್ಲಿಸಿದ ಪ್ರತಾಪ್ ಸಿಂಹ:

ಪ್ರತಾಪ್ ಸಿಂಹ ತಮ್ಮ ಅರ್ಜಿಯಲ್ಲಿ, ಸರ್ಕಾರದ ಈ ನಿರ್ಧಾರವು ಏಕಪಕ್ಷೀಯವಾಗಿದ್ದು, ದಸರಾ ಹಬ್ಬದ ಸಾಂಸ್ಕೃತಿಕ ಮತ್ತು ಧಾರ್ಮಿಕ ಮಹತ್ವವನ್ನು ಅವಗಣಿಸಿದೆ ಎಂದು ದೂರಿದ್ದಾರೆ. ಬಾನು ಮುಷ್ತಾಕ್‌ರ ಆಯ್ಕೆಯಿಂದ ಹಿಂದೂ ಸಮುದಾಯದ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ಆರೋಪಿಸಿರುವ ಅವರು, ಸರ್ಕಾರವು ಆಹ್ವಾನವನ್ನು ಹಿಂಪಡೆಯುವಂತೆ ನಿರ್ದೇಶಿಸಲು ಕೋರ್ಟ್‌ಗೆ ಮನವಿ ಮಾಡಿದ್ದಾರೆ.

Exit mobile version