ಅಪ್ರಾಪ್ತೆಯ ಮೇಲೆ ಅತ್ಯಾಚಾರ: ಲೋಕೇಶ್ವರ ಸ್ವಾಮೀಜಿ ಅರೆಸ್ಟ್

Befunky collage 2025 05 24t114539.795

ಬೆಳಗಾವಿ: ರಾಯಬಾಗ ತಾಲೂಕಿನ ಮೇಖಳಿಯ ರಾಮಮಂದಿರದ ಲೋಕೇಶ್ವರ ಸ್ವಾಮೀಜಿಯನ್ನು ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಪೊಲೀಸರು ಬಂಧಿಸಿದ್ದಾರೆ. 17 ವರ್ಷದ ಬಾಲಕಿಯ ವಿರುದ್ಧ ಈ ಜಘನ್ಯ ಕೃತ್ಯ ನಡೆದಿದ್ದು, ಪೋಕ್ಸೋ ಕಾಯಿದೆಯಡಿ (POCSO Act) ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಜೈಲಿಗೆ ಕಳುಹಿಸಲಾಗಿದ್ದು, ಪ್ರಕರಣದ ತನಿಖೆಯನ್ನು ಬೆಳಗಾವಿಯ ಮೂಡಲಗಿ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.

ಈ ಘಟನೆಯ ಹಿನ್ನೆಲೆ ಏನು?

17 ವರ್ಷದ ಬಾಲಕಿಯ ಆರೋಗ್ಯ ಸರಿಯಿಲ್ಲದ ಕಾರಣ, ಆಕೆಯ ಪೋಷಕರು ಆಗಾಗ ಮಠಕ್ಕೆ ಕರೆತಂದು ಸ್ವಾಮೀಜಿಯ ಸುಪರ್ದಿಗೆ ಒಪ್ಪಿಸುತ್ತಿದ್ದರು. ಕೆಲವೊಮ್ಮೆ ವಾರಗಟ್ಟಲೇ ಆಕೆಯನ್ನು ಮಠದಲ್ಲಿಯೇ ಬಿಟ್ಟು ಹೋಗುತ್ತಿದ್ದರು. ಈ ಸಂದರ್ಭದಲ್ಲಿ, ಲೋಕೇಶ್ವರ ಸ್ವಾಮೀಜಿ ಬಾಲಕಿಯನ್ನು ಆಕೆಯ ಮನೆಗೆ ಕರೆದೊಯ್ಯುವ ತೀರ್ಮಾನ ಕೈಗೊಂಡಿದ್ದರು. ಮೇ 13ರಂದು ಇಬ್ಬರು ಕಾರಿನಲ್ಲಿ ರಾಯಚೂರಿಗೆ ಪ್ರಯಾಣ ಬೆಳೆಸಿದ್ದರು. ರಾಯಚೂರಿನಲ್ಲಿ ಎರಡು ದಿನ ಇದ್ದ ನಂತರ, ಮೇ 15 ರಂದು ಬಾಗಲಕೋಟೆಗೆ ತಲುಪಿದ್ದರು.

ತನಿಖೆಯ ವಿವರಗಳ ಪ್ರಕಾರ, ರಾಯಚೂರು ಮತ್ತು ಬಾಗಲಕೋಟೆಯ ಲಾಡ್ಜ್‌ನಲ್ಲಿ ಆರೋಪಿ ಸ್ವಾಮೀಜಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈ ಘಟನೆಯನ್ನು ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಮೇ 16 ರಂದು ಆರೋಪಿ ಬಾಲಕಿಯನ್ನು ಮಹಾಲಿಂಗಪುರ ಬಸ್ ನಿಲ್ದಾಣದಲ್ಲಿ ಬಿಟ್ಟು ತೆರಳಿದ್ದಾನೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಬಾಲಕಿಯ ಕುಟುಂಬವು ಮೇ 17 ರಂದು ಬಾಗಲಕೋಟೆಯ ನವನಗರ ಮಹಿಳಾ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿತು. ವಿಚಾರಣೆಯ ಸಂದರ್ಭದಲ್ಲಿ ಬಾಲಕಿಯು ಎಲ್ಲಾ ಘಟನೆಗಳನ್ನು ವಿವರವಾಗಿ ತಿಳಿಸಿದ್ದಾಳೆ.

ಪ್ರಕರಣವನ್ನು ಬಾಗಲಕೋಟೆಯಿಂದ ಬೆಳಗಾವಿಯ ಮೂಡಲಗಿ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ತನಿಖೆಯ ಸಂದರ್ಭದಲ್ಲಿ, ಗ್ರಾಮಸ್ಥರು ಮಠದಲ್ಲಿ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿದ್ದವು ಎಂದು ಆರೋಪಿಸಿದ್ದಾರೆ. 2021 ರಲ್ಲಿ ಗ್ರಾಮಸ್ಥರು ಸ್ವಾಮೀಜಿಗೆ ಧರ್ಮದೇಟು ನೀಡಿ, ಎಚ್ಚರಿಕೆಯನ್ನೂ ನೀಡಿದ್ದರು. ಆದರೆ, ಆರೋಪಿಯು ತನ್ನ ಕೃತ್ಯಗಳನ್ನು ಮುಂದುವರಿಸಿದ್ದಾನೆ ಎಂದು ಗ್ರಾಮಸ್ಥರ ಆರೋಪವಿದೆ.

Exit mobile version