ಎಂ.ಜಿ. ರೋಡ್ ಪ್ರತಿಷ್ಠಿತ ಹೋಟೆಲ್‌ನಲ್ಲಿ ಯುವತಿಯ ಮೇಲೆ ಹಲ್ಲೆ: ಬಟ್ಟೆ ಹರಿಯಲು ಯತ್ನಿಸಿದ ಮ್ಯಾನೇಜರ್?

BeFunky collage (80)

ಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿ (MG Road) ಆಘಾತಕಾರಿ ಘಟನೆಯೊಂದು ನಡೆದಿದೆ. ಪ್ರಖ್ಯಾತ ‘ತಂದೂರ್ ಹೋಟೆಲ್’ಗೆ ಊಟಕ್ಕೆಂದು ಹೋದ ಯುವತಿಯ ಮೇಲೆ ಹೋಟೆಲ್ ಮ್ಯಾನೇಜರ್ ಅಸಭ್ಯವಾಗಿ ವರ್ತಿಸಿ, ಹಲ್ಲೆ ನಡೆಸಿರುವ ದೂರು ದಾಖಲಾಗಿದೆ.

ಊಟಕ್ಕೆ ಹೋದವಳಿಗೆ ಒದಗಿಬಂತು ಆಪತ್ತು :

ಏಪ್ರಿಲ್ 27ರ ಮಧ್ಯಾಹ್ನ ಕೀರ್ತಿ ಎಂಬ ಯುವತಿ ತನ್ನ ಸ್ನೇಹಿತರೊಂದಿಗೆ ತಂದೂರ್ ಹೋಟೆಲ್‌ಗೆ ತೆರಳಿದ್ದರು. ಈ ಸಂದರ್ಭದಲ್ಲಿ ಆರ್ಡರ್ ಅಥವಾ ಬಿಲ್ಲಿಂಗ್‌ಗೆ ಸಂಬಂಧಿಸಿದ ಕ್ಷುಲ್ಲಕ ವಿಚಾರಕ್ಕೆ ಗ್ರಾಹಕರು ಮತ್ತು ಮ್ಯಾನೇಜರ್ ರವಿ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಗಲಾಟೆ ವಿಕೋಪಕ್ಕೆ ತಿರುಗಿದಾಗ ಮ್ಯಾನೇಜರ್ ಸಂಯಮ ಕಳೆದುಕೊಂಡು ಯುವತಿಯ ಮೇಲೆ ಮುಗಿಬಿದ್ದಿದ್ದಾನೆ ಎಂದು ಹೇಳಲಾಗಿದೆ.

ಬಟ್ಟೆ ಹರಿಯಲು ಯತ್ನಿಸಿದ ಗಂಭೀರ ಆರೋಪ :

ಯುವತಿ ನೀಡಿರುವ ದೂರಿನ ಪ್ರಕಾರ, ಮ್ಯಾನೇಜರ್ ರವಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಸಾರ್ವಜನಿಕವಾಗಿ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಅಷ್ಟೇ ಅಲ್ಲದೆ, ಗಲಾಟೆಯ ಭರದಲ್ಲಿ ಯುವತಿಯ ಬಟ್ಟೆ ಹರಿಯಲು ಯತ್ನಿಸಿ ವಿಕೃತಿ ಮೆರೆದಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಘಟನೆಯಿಂದ ಯುವತಿ ಮತ್ತು ಆಕೆಯ ಸ್ನೇಹಿತರು ತೀವ್ರ ಆಘಾತಕ್ಕೊಳಗಾಗಿದ್ದಾರೆ.

ಘಟನೆ ನಡೆದ ಕೂಡಲೇ ಕೀರ್ತಿ ಅವರು ಹಲಸೂರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಯುವತಿಯ ದೂರಿನನ್ವಯ ಪೊಲೀಸರು ಮ್ಯಾನೇಜರ್ ರವಿ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಹೋಟೆಲ್‌ನಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.

Exit mobile version