ಮಂಡ್ಯದಲ್ಲಿ ಕೈಕೊಟ್ಟ ಮುಂಗಾರು: ಬರಿದಾದ ಕೆರೆ-ಕಟ್ಟೆಗಳು

ಯ್ಯ (2)

ಮಂಡ್ಯ ಸೆ.12: ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಮಂಡ್ಯ ಜಿಲ್ಲೆಯ ಹಲವು ಭಾಗಗಳಲ್ಲಿ ಬರದ ಪರಿಸ್ಥಿತಿ ತೀವ್ರಗೊಂಡಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದರಲ್ಲೂ ಮಂಡ್ಯ ತಾಲೂಕಿನ ಬಸರಾಳು ಹೋಬಳಿ ವ್ಯಾಪ್ತಿಯಲ್ಲಿ ಮಳೆಯ ಕೊರತೆಯಿಂದ ಕೆರೆ-ಕಟ್ಟೆಗಳು ಬರಿದಾಗಿದ್ದು, ಕೃಷಿ ಚಟುವಟಿಕೆಗಳಿಗೆ ಮಾತ್ರವಲ್ಲದೆ ಜನ-ಜಾನುವಾರುಗಳ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ.

ಬಸರಾಳು ಹೋಬಳಿ ಸಂಪೂರ್ಣವಾಗಿ ಮಳೆಯಿಲ್ಲದೆ ಬರಡಾಗಿದ್ದು, ಈ ಭಾಗದ ರೈತರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಕೆರೆ-ಕಟ್ಟೆಗಳು ಒಣಗಿರುವುದರಿಂದ ಜಾನುವಾರುಗಳಿಗೆ ನೀರು ಒದಗಿಸುವುದೂ ಕಷ್ಟವಾಗಿದೆ. ಕುಡಿಯುವ ನೀರಿನ ಸಮಸ್ಯೆಯೂ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ ಬಸರಾಳು ಗ್ರಾಮದಲ್ಲಿ ರೈತರು ಬೃಹತ್ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಹೇಮಾವತಿ ನಾಲೆಯಿಂದ ಬಸರಾಳು ಹೋಬಳಿ ವ್ಯಾಪ್ತಿಯ ಕೆರೆ-ಕಟ್ಟೆಗಳನ್ನು ತುಂಬಿಸಲು ನೀರು ಹರಿಸುವಂತೆ ಆಗ್ರಹಿಸಿ ರೈತರು ರಸ್ತೆ ತಡೆ ನಡೆಸಿದರು. ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ತಿಮ್ಮೇಗೌಡ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಾವಿರಾರು ರೈತರು ಭಾಗವಹಿಸಿ ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.

ಬಸರಾಳು ಭಾಗಕ್ಕೆ ಕೆಆರ್‌ಎಸ್ ಡ್ಯಾಂ ನೀರಿನ ನೇರ ಸೌಲಭ್ಯ ಇಲ್ಲ. ಹೀಗಾಗಿ ಹೇಮಾವತಿ ನಾಲೆಯಿಂದ ನೀರು ಹರಿಸಿ ಇಲ್ಲಿನ ಕೆರೆ-ಕಟ್ಟೆಗಳನ್ನು ತುಂಬಿಸುವುದೊಂದೇ ಸದ್ಯದ ಪರಿಹಾರ ಎಂದು ರೈತರು ಒತ್ತಾಯಿಸಿದ್ದಾರೆ. ಇತರೆ ಭಾಗಗಳಿಗೆ ನೀರು ಹರಿಸಲಾಗುತ್ತಿದ್ದರೂ ಬಸರಾಳು ಸೆಕ್ಷನ್‌ನ ಕೆರೆಗಳಿಗೆ ಮಾತ್ರ ನೀರು ಬಿಡುತ್ತಿಲ್ಲ ಎಂದು ರೈತರು ಆರೋಪಿಸಿದ್ದಾರೆ.

ಅಧಿಕಾರಿಗಳು ವಿವಿಧ ಕಾರಣಗಳನ್ನು ನೀಡುತ್ತಾ ರೈತರ ಸಮಸ್ಯೆಯನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೂಡಲೇ ಬಸರಾಳು ಸೆಕ್ಷನ್‌ಗೆ ಕನಿಷ್ಠ 400 ಕ್ಯೂಸೆಕ್ಸ್ ನೀರು ಹರಿಸಿ, ಅಲ್ಲಿನ ಕೆರೆ-ಕಟ್ಟೆಗಳನ್ನು ಭರ್ತಿ ಮಾಡಬೇಕು. ಇಲ್ಲವಾದರೆ ಜನರು ಹಾಗೂ ಜಾನುವಾರುಗಳು ಕುಡಿಯುವ ನೀರಿಗಾಗಿ ಮತ್ತಷ್ಟು ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ರೈತರೊಂದಿಗೆ ಮಾತುಕತೆ ನಡೆಸಿದರು. ಕೆರೆ-ಕಟ್ಟೆಗಳಿಗೆ ನೀರು ಹರಿಸುವ ಕುರಿತು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಅಧಿಕಾರಿಗಳ ಭರವಸೆಯ ಬಳಿಕ ರೈತರು ಪ್ರತಿಭಟನೆ ತಾತ್ಕಾಲಿಕವಾಗಿ ಹಿಂಪಡೆದಿದ್ದಾರೆ.

ಮುಂಗಾರು ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಬಸರಾಳು ಹೋಬಳಿ ಸೇರಿದಂತೆ ಜಿಲ್ಲೆಯ ಬರಪೀಡಿತ ಪ್ರದೇಶಗಳಲ್ಲಿ ಕುಡಿಯುವ ನೀರು ಹಾಗೂ ಕೃಷಿ ಸಮಸ್ಯೆ ಮತ್ತಷ್ಟು ಉಲ್ಬಣಿಸುವ ಆತಂಕವಿದೆ. ಹೀಗಾಗಿ ರೈತರ ಬೇಡಿಕೆಯಂತೆ ನಾಲೆಗಳಿಗೆ ತಕ್ಷಣ ನೀರು ಹರಿಸಿ ಕೆರೆ-ಕಟ್ಟೆಗಳನ್ನು ತುಂಬಿಸಬೇಕೆಂಬ ಒತ್ತಾಯ ಕೇಳಿಬಂದಿದೆ.

Exit mobile version