ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಗಣೇಶೋತ್ಸವ ವಿಸರ್ಜನಾ ಮೆರವಣಿಗೆಯ ಸಂದರ್ಭದಲ್ಲಿ ಕಲ್ಲು ತೂರಾಟದಿಂದ ಉಂಟಾದ ಗಲಾಟೆಗೆ ಸಂಬಂಧಿಸಿದಂತೆ ಮದ್ದೂರು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಶಿವಕುಮಾರ್ ಅವರನ್ನು ಕರ್ತವ್ಯ ಲೋಪದ ಆರೋಪದ ಮೇಲೆ ಸಸ್ಪೆಂಡ್ ಮಾಡಲಾಗಿದೆ. ರಾಜ್ಯ ಸರ್ಕಾರವು ಈ ಕುರಿತು ಆದೇಶ ಹೊರಡಿಸಿದ್ದು, ಘಟನೆಯ ಸಂದರ್ಭದಲ್ಲಿ ಶಿವಕುಮಾರ್ ಸ್ಥಳದಲ್ಲಿ ಇರದಿರುವುದು ಅವರ ಅಮಾನತಿಗೆ ಕಾರಣವಾಗಿದೆ ಎಂದು ತಿಳಿದುಬಂದಿದೆ.
ಸೆಪ್ಟೆಂಬರ್ 7, 2025 ರಂದು ಮದ್ದೂರಿನಲ್ಲಿ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯ ವೇಳೆ ಕಲ್ಲು ತೂರಾಟದಿಂದ ಗಲಾಟೆ ಉಂಟಾಗಿತ್ತು. ಈ ಘಟನೆಯಲ್ಲಿ 8 ಜನ ಗಾಯಗೊಂಡಿದ್ದು, 22 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಎರಡು ಎಫ್‌ಐಆರ್‌ಗಳು ದಾಖಲಾಗಿವೆ ಮತ್ತು ಘಟನೆಗೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಾವಳಿಗಳನ್ನು ವಿಶ್ಲೇಷಿಸಿ, ಪುರಾವೆಗಳ ಆಧಾರದ ಮೇಲೆ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ದಕ್ಷಿಣ ವಲಯ ಐಜಿಪಿ ಎಂ.ಬಿ. ಬೋರಲಿಂಗಯ್ಯ ಅವರು, “ಕಲ್ಲು ತೂರಾಟದಲ್ಲಿ ಭಾಗಿಯಾದವರನ್ನು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಬಂಧಿಸಲಾಗಿದೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದೆ, ಮತ್ತು ಹೆಚ್ಚಿನ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ,” ಎಂದು ತಿಳಿಸಿದ್ದಾರೆ.
ಸಚಿವ ಚಲುವರಾಯಸ್ವಾಮಿ ಅವರ ಪ್ರತಿಕ್ರಿಯೆ
ಮಂಡ್ಯದಲ್ಲಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಈ ಘಟನೆಯ ಬಗ್ಗೆ ಮಾತನಾಡಿದ್ದು, “ಇನ್ಸ್‌ಪೆಕ್ಟರ್ ಶಿವಕುಮಾರ್ ಘಟನೆಯ ಸಂದರ್ಭದಲ್ಲಿ ಸ್ಥಳದಲ್ಲಿ ಇರದ ಕಾರಣ ಸಸ್ಪೆಂಡ್ ಆಗಿದ್ದಾರೆ. ಶಾಂತಿ ಸಭೆಯಲ್ಲಿ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿತ್ತು, ಆದರೆ ಪೊಲೀಸ್ ವೈಫಲ್ಯದಿಂದ ಈ ಘಟನೆ ಸಂಭವಿಸಿದೆ. ಇನ್ಮುಂದೆ ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗುವುದು,” ಎಂದು ಎಚ್ಚರಿಕೆ ನೀಡಿದ್ದಾರೆ.
ಅವರು ಮಾತನಾಡುತ್ತಾ, “ಎಎಸ್ಪಿ ವರ್ಗಾವಣೆಗೂ ಈ ಘಟನೆಗೂ ಯಾವುದೇ ಸಂಬಂಧವಿಲ್ಲ. ಇದು ಸಾಮಾನ್ಯ ವರ್ಗಾವಣೆಯಾಗಿದ್ದು, ತಿಮ್ಮಯ್ಯನವರು ಉತ್ತಮ ಕೆಲಸ ಮಾಡಿದ್ದಾರೆ,” ಎಂದು ಸ್ಪಷ್ಟಪಡಿಸಿದ್ದಾರೆ. ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದಿದ್ದು, ಸ್ಥಳಕ್ಕೆ ಭೇಟಿ ನೀಡುವ ಅಗತ್ಯವಿಲ್ಲ ಎಂದು ಸಚಿವರು ತಿಳಿಸಿದ್ದಾರೆ.
ಮುಖ್ಯಮಂತ್ರಿಯ ಹೇಳಿಕೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ್ದು, “ತಪ್ಪು ಮಾಡಿದವರ ವಿರುದ್ಧ ಜಾತಿ-ಧರ್ಮ ಪರಿಗಣಿಸದೆ ಕಾನೂನು ಕ್ರಮ ಕೈಗೊಳ್ಳಲಾಗುವುದು. 21 ಜನರನ್ನು ಈಗಾಗಲೇ ಬಂಧಿಸಲಾಗಿದೆ,” ಎಂದು ತಿಳಿಸಿದ್ದಾರೆ. ಬಿಜೆಪಿಯವರ ಪಾದಯಾತ್ರೆಯ ಬಗ್ಗೆ ವ್ಯಂಗ್ಯವಾಡಿದ ಅವರು, “ಸಮಾಜದಲ್ಲಿ ಶಾಂತಿ ಕದಡುವುದೇ ಬಿಜೆಪಿಯ ಉದ್ದೇಶವಾಗಿದೆ,” ಎಂದು ಟೀಕಿಸಿದ್ದಾರೆ.