ಕಾಡು ಬಿಟ್ಟು ಬೆಡ್‌ ರೂಮ್ ಸೇರಿದ ಚಿರತೆ

ಚಿರತೆ ಸೆರೆ, ನಿಟ್ಟುಸಿರು ಬಿಟ್ಟ ಕುಂಟ್ಲುರೆಡ್ಡಿ ಲೇಔಟ್‌ನ ಜನತೆ

Siddu stalin kcr (7)

ಚಿರತೆನ ಪೋಟೊದಲ್ಲಿ ನೋಡಿರ್ತೀರ, ಸಿನಿಮಾದಲ್ಲಿ ನೋಡಿರ್ತೀರ, ಟಿವಿಯಲ್ಲಿ ನೋಡಿರ್ತೀರ, ಅಷ್ಟೇ ಯಾಕೆ ಝೂನಲ್ಲಿ ನೋಡಿರ್ತೀರ, ಯಾವತ್ತಾದರೂ ಚಿರತೆ ಮನೆಯೊಳಗೆ ಹೋಗಿರುವುದು ನೋಡಿದಿರ.

ಹೌದು ಕಣ್ರಿ ಬೆಂಗಳೂರಿನ ಜಿಗಣಿಯ ಕುಂಟ್ಲುರೆಡ್ಡಿ ಲೇಔಟ್‌ನಲ್ಲಿ ಇಂದು  ಈ ಘಟನೆ  ಎಂತವರನ್ನು ಒಂದು ಕ್ಷಣ ಮೈಜುಮ್ಮೆನಿಸುತ್ತದೆ. ವೆಂಕಟೇಶ್ ಎಂಬುವವರು ಇವತ್ತು ಬೆಳಗ್ಗೆ ಎದ್ದ ಕೂಡಲೇ ಅವರಿಗೆ ಚಿರತೆ ಕಾಣಿಸಿಕೊಂಡಿದೆ. ವೆಂಕಟೇಶ್ ಮನೆಯಿಂದ ಹೊರಗಡೆ ಬರ್ತಿದ್ದಂತೆ  ಚಿರತೆ ಮನೆಯೊಳಗೆ ಹೋಗಿದೆ. ಕೂಡಲೇ ವೆಂಕಟೇಶ್ ಮನೆ ಬಾಗಿಲನ್ನು ಉಪಾಯದಿಂದ ಲಾಕ್ ಮಾಡಿ ಹೊರಗೆ ಬಂದಿದ್ದಾರೆ. ಮನೆಗೆ ನುಗ್ಗಿದ ಚಿರತೆಯನ್ನು ಲಾಕ್ ಮಾಡುವ ಮೂಲಕ ವೆಂಕಟೇಶ್ ಧೈರ್ಯ ಪ್ರದರ್ಶಿಸಿದ್ದಾರೆ.

ನೆನ್ನೆ ರಾತ್ರಿಯಿಂದಲೇ ಮಂಜುನಾಥ್ ಎಂಬುವವರಿಗೆ ಸೇರಿದ ಬಿಲ್ಡಿಂಗ್‌ನಲ್ಲಿ ರೌಂಡ್ಸ್ ಹಾಕಿರುವ ಚಿರತೆ ಬೆಳಗ್ಗೆ ಬಾಡಿಗೆದಾರ ವೆಂಕಟೇಶ್ ಮನೆಯೊಳಗೆ ಹೋಗಿದೆ. ಕೂಡಲೇ ಮನೆ ಬಾಗಿಲನ್ನು ಮುಚ್ಚುವ ಮೂಲಕ ವೆಂಕಟೇಶ್‌ ಅವರು ಚಿರತೆ ಸೆರೆ ಹಿಡಿಯಲು ಪ್ರಯತ್ನಿಸಿದ್ದಾರೆ.

ವೆಂಕಟೇಶ್ ಹಾಗೂ ಸ್ಥಳೀಯರು ಮನೆಯೊಳಗೆ ಚಿರತೆಯನ್ನು ಲಾಕ್ ಮಾಡಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಅರಣ್ಯ ಇಲಾಖೆ ಸಿಬ್ಬಂದಿ ಬೋನಿನ ಸಮೇತ ವೆಂಕಟೇಶ್ ಅವರ ಮನೆಗೆ ಆಗಮಿಸಿದ್ದಾರೆ. ಚಿರತೆಗೆ ಅರವಳಿಕೆ ಮದ್ದು ನೀಡಿ ಸೆರೆ ಹಿಡಿಯಲು ಸತತ 4 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ್ದಾರೆ.

ಮನೆಯೊಳಗೆ ಸೇರಿದ ಚಿರತೆ ಭಯದಲ್ಲಿ ಬೆಡ್ ರೂಮ್‌ಗೆ ಹೋಗಿ ಬಚ್ಚಿಟ್ಟುಕೊಂಡಿದೆ. ಅರಣ್ಯ ಇಲಾಖೆ ಸಿಬ್ಬಂದಿ ಹೆಲ್ಮೇಟ್ ಧರಿಸಿ ಅರವಳಿಕೆ ಇಂಜಕ್ಷನ್ ಕೊಡಲು ಸಾಕಷ್ಟು ಶ್ರಮಿಸಿದ್ದಾರೆ. ತಜ್ಞ ವೈದ್ಯ ಕಿರಣ್ ಅವರು ಚಿರತೆಗೆ ಅರವಳಿಕೆ ಇಂಜಕ್ಷನ್ ಡಾಟ್ ನೀಡಿದರು . ಚಿರತೆ ಪ್ರಜ್ಞೆ ತಪ್ಪಿದ ನಂತರ ಬೋನಿಗೆ ಶಿಫ್ಟ್ ಮಾಡಲಾಗಿದೆ.

ಚಿರತೆ ಕಾರ್ಯಾಚರಣೆ ಸತತ 4 ಗಂಟೆಗಳ ಬಳಿಕ ಕಡೆಗೂ ಚಿರತೆ ಬೋನಿಗೆ ಬಿದ್ದಿದೆ. ಆಪರೇಷನ್ ಚಿರತೆ ಹಿನ್ನಲೆಯಲ್ಲಿ ಕುಂಟ್ಲುರೆಡ್ಡಿ ಲೇಔಟ್‌ನಲ್ಲಿ ಜನಜಂಗುಳಿಯಿತ್ತು. ಮನೆಯ ಸುತ್ತಮುತ್ತ ಪೋಲಿಸರು ಭದ್ರತೆ ಕೈಗೊಂಡು ಹೊರಗಡೆ ನಿಂತ ಜನರನ್ನು ಚದುರಿಸಿದರು. ಅರಣ್ಯ ಇಲಾಖೆ, ವೈದ್ಯರು ಮತ್ತು ಪೋಲಿಸರ ಕಾರ್ಯಾಚರಣೆಯಿಂದ ಸತತ 4 ಗಂಟೆಗಳ ಆಪರೇಷನ್ ಯಶಸ್ವಿಗೊಳಿಸಿದರು . ಆತಂಕದಲ್ಲಿದ್ದ ಜನ, ಚಿರತೆ ಸೆರೆಯಿಂದ ನಿಟ್ಟುಸಿರು ಬಿಟ್ಟಿದ್ದು, ವೆಂಕಟೇಶ್ ದಂಪತಿಯ ದಿಟ್ಟತನಕ್ಕೆ ಖುಷಿಯಾಗಿದ್ದಾರೆ.  ಸ್ಥಳೀಯರು ಈ ದಂಪತಿಗಳ ಜೊತೆ ಪೋಟೊ ತೆಗೆದು ಖುಷಿ ಪಟ್ಟರು.

Exit mobile version