ಕೋಗಿಲು ಕ್ರಾಸ್‌‌ಗೆ ಬಂದಿದ್ದ ಬಿಜೆಪಿಗರ ವಿರುದ್ಧ ಸಂತ್ರಸ್ತರು ಗರಂ!

ಆರ್‌.ಅಶೋಕ್‌ ವಿರುದ್ಧ ಕೋಗಿಲು ನಿವಾಸಿಗಳು ಕೆಂಡಾಮಂಡಲ!

BeFunky collage (82)

ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಕೋಗಿಲೆ ಕ್ರಾಸ್ ಪ್ರದೇಶಕ್ಕೆ ಭೇಟಿ ನೀಡಿದ್ದ ವಿಪಕ್ಷ ನಾಯಕ ಆರ್. ಅಶೋಕ್ ಅವರ ವಿರುದ್ಧ ಸ್ಥಳೀಯ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಕ್ರಮ ನಿರ್ಮಾಣ ಮತ್ತು ಅಕ್ರಮ ವಲಸಿಗರು ಎಂಬ ಆರೋಪಗಳನ್ನು ಮಾಡಿದ್ದ ಆರ್. ಅಶೋಕ್ ಅವರಿಗೆ ನಿವಾಸಿಗಳು ಸತತ ಪ್ರಶ್ನೆಗಳ ಸುರಿಮಳೆಗೈದರು.

“ನಮ್ಮ ಸಂಬಂಧಿಕರು ಬೇರೆ ರಾಜ್ಯದಲ್ಲೂ ಇರಬಾರದಾ? ಸಂಬಂಧಿಕರ ವೀಡಿಯೋ ತೋರಿಸಿ ಬೇರೆ ರಾಜ್ಯದವರು ಅಂತಾರಲ್ಲ, ಅದು ಸರಿನಾ? ಬೇರೆ ದೇಶದವರು ಇಲ್ಲಿ ಇದ್ದಾರೆ ಅಂತ ಹೇಳಿದ್ದಾರೆ ಅಲ್ವಾ? ಬೇರೆ ದೇಶದಿಂದ ಬರೋಕ್ಕೆ ಪಾಸ್‌ಪೋರ್ಟ್ ಕೊಟ್ಟಿದ್ದು ಯಾರು? ಪ್ಯಾನ್ ಕಾರ್ಡ್ ಕೊಟ್ಟಿದ್ದು ಕೇಂದ್ರ ಸರ್ಕಾರ ಅಲ್ವಾ?” ಎಂದು ನಿವಾಸಿಗಳು ಆರ್. ಅಶೋಕ್ ಅವರನ್ನು ಪ್ರಶ್ನಿಸಿದರು.

ಕೋಗಿಲೆ ಕ್ರಾಸ್‌ನಲ್ಲಿ ಯಾರೂ ಅಕ್ರಮ ವಲಸಿಗರು ಇಲ್ಲ ಎಂದು ನಿವಾಸಿಗಳು ಸ್ಪಷ್ಟಪಡಿಸಿದರು. ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿದ್ದು ತಪ್ಪು ಎಂಬುದನ್ನು ಒಪ್ಪಿಕೊಂಡ ಅವರು, ಸರ್ಕಾರ ಬೇರೆ ಕಡೆ ಮನೆ ಕೊಡುವ ಭರವಸೆ ನೀಡಿದೆ ಎಂದು ಹೇಳಿದರು. ಆದರೆ ವಿಪಕ್ಷ ನಾಯಕರು ಸುಳ್ಳು ಮಾಹಿತಿ ನೀಡಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂಬ ಆರೋಪ ಮಾಡಿದರು.

ಆರ್. ಅಶೋಕ್ ಅವರು ಸ್ಥಳಕ್ಕೆ ಭೇಟಿ ನೀಡಿ ಅಕ್ರಮ ನಿರ್ಮಾಣಗಳ ಬಗ್ಗೆ ಮಾತನಾಡಿದ್ದರು. ಆದರೆ ನಿವಾಸಿಗಳು ಇದನ್ನು ತಮ್ಮ ವಿರುದ್ಧ ರಾಜಕೀಯ ದುರುದ್ದೇಶಪೂರ್ವಕ ಆರೋಪ ಎಂದು ಖಂಡಿಸಿದ್ದಾರೆ. ಈ ಘಟನೆಯಿಂದ ಸ್ಥಳೀಯರಲ್ಲಿ ಬೇಸರ ಮತ್ತು ಆಕ್ರೋಶ ವ್ಯಕ್ತವಾಗಿದೆ.

ಕೋಗಿಲೆ ಕ್ರಾಸ್ ಪ್ರದೇಶದಲ್ಲಿ ಸರ್ಕಾರಿ ಜಾಗದ ಆಕ್ರಮಣ ಸಮಸ್ಯೆ ದೀರ್ಘಕಾಲದಿಂದಲೂ ಚರ್ಚೆಯಲ್ಲಿದೆ. ಸರ್ಕಾರ ಪುನರ್ವಸತಿ ಯೋಜನೆಯಡಿ ಪರಿಹಾರ ಒದಗಿಸುವ ಭರವಸೆ ನೀಡಿದೆ. ಆದರೆ ರಾಜಕೀಯ ನಾಯಕರ ಹೇಳಿಕೆಗಳು ಸಮಸ್ಯೆಯನ್ನು ಮತ್ತಷ್ಟು ಉಲ್ಬಣಗೊಳಿಸುತ್ತಿವೆ ಎಂಬುದು ನಿವಾಸಿಗಳ ಅಭಿಪ್ರಾಯ.

Exit mobile version