ಮಡಿಕೇರಿ: ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಹಾಗೂ ಶಾಂತಿನಗರ ಶಾಸಕ ಎನ್.ಎ. ಹ್ಯಾರಿಸ್ ಅವರ ಪುತ್ರ ಮೊಹಮ್ಮದ್ ನಲಪಾಡ್ ಅವರ ಎರಡನೇ ವಿವಾಹ ಸಮಾರಂಭ ಇಂದು ಕೊಡಗಿನ ಮಡಿಕೇರಿಯ ಮೇಕೇರಿ ಗ್ರಾಮದಲ್ಲಿರುವ ಪ್ರತಿಷ್ಠಿತ ಕೂರ್ಗ್ ವೈಲ್ಡರ್‌ನೆಟ್ ರೆಸಾರ್ಟ್‌ನಲ್ಲಿ ಅದ್ದೂರಿಯಾಗಿ ನಡೆಯಿತು. ರಾಜಕೀಯ, ಸಿನಿಮಾ ಹಾಗೂ ಗಣ್ಯರ ಸಮ್ಮುಖದಲ್ಲಿ ನಡೆದ ಈ ಸಮಾರಂಭ ಗಮನ ಸೆಳೆಯಿತು.
ವಿವಾಹ ಸಮಾರಂಭದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ನಟ ಕಿಚ್ಚ ಸುದೀಪ್, ರಾಕಿಂಗ್ ಸ್ಟಾರ್ ಯಶ್ ಸೇರಿದಂತೆ ಹಲವು ರಾಜಕೀಯ ನಾಯಕರು, ಉದ್ಯಮಿಗಳು ಮತ್ತು ಆಪ್ತರು ಭಾಗವಹಿಸಿ ನವದಂಪತಿಗೆ ಶುಭಾಶಯ ಕೋರಿದರು. ಆಗಸ್ಟ್ 20ರವರೆಗೆ ಮದುವೆ ಸಂಭ್ರಮ ವಿವಿಧ ಸಾಂಪ್ರದಾಯಿಕ ಹಾಗೂ ಕುಟುಂಬ ಕಾರ್ಯಕ್ರಮಗಳೊಂದಿಗೆ ಮುಂದುವರಿಯಲಿದೆ.
ಮೊಹಮ್ಮದ್ ನಲಪಾಡ್ ಅವರು 2017ರಲ್ಲಿ ಸಮೀನ್ ಅವರೊಂದಿಗೆ ವಿವಾಹವಾಗಿದ್ದರು. ಇದೀಗ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಹಾಗೂ ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಐ. ಮುನೀರ್ ಅಹಮ್ಮದ್ ಅವರ ಮೂರನೇ ಪುತ್ರಿ ಮಲಿಹಾ ಫಾತಿಮಾ ಅವರನ್ನು ವರಿಸಿದ್ದಾರೆ.
ಮಲಿಹಾ ಫಾತಿಮಾ ಕಾನೂನು ವ್ಯಾಸಂಗ ಪೂರ್ಣಗೊಳಿಸಿದ್ದು, ಅಮೆರಿಕ ಮೂಲದ ಬಹುರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದಾರೆ. ಎರಡೂ ಕುಟುಂಬಗಳ ಪರಸ್ಪರ ಒಪ್ಪಿಗೆಯೊಂದಿಗೆ ಈ ವಿವಾಹ ನಿಶ್ಚಯಗೊಂಡಿದ್ದು, ಆಪ್ತ ಬಂಧು-ಬಳಗದ ಸಮ್ಮುಖದಲ್ಲಿ ವೈಭವದಿಂದ ನೆರವೇರಿದೆ.
ಮುನೀರ್ ಅಹಮ್ಮದ್ ಅವರು ಕಾಂಗ್ರೆಸ್‌ನ ಹಿರಿಯ ಮುಖಂಡ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಬಿ.ಎ. ಹಸನಬ್ಬ ಅವರ ಸಹೋದರಿ ಪುತ್ರರಾಗಿದ್ದಾರೆ. ಎನ್.ಎ. ಹ್ಯಾರಿಸ್ ಹಾಗೂ ಮುನೀರ್ ಅಹಮ್ಮದ್ ಸುಮಾರು ಎರಡು ದಶಕಗಳಿಂದ ಆತ್ಮೀಯ ಸ್ನೇಹಿತರಾಗಿದ್ದು, ಆ ಸ್ನೇಹ ಇದೀಗ ವೈವಾಹಿಕ ಸಂಬಂಧವಾಗಿ ಮತ್ತಷ್ಟು ಗಟ್ಟಿಯಾಗಿದೆ.
ಕೊಡಗಿನಲ್ಲಿ ನಡೆದ ಈ ಮದುವೆ ಸಮಾರಂಭದಲ್ಲಿ ಭದ್ರತಾ ವ್ಯವಸ್ಥೆಯನ್ನೂ ಬಿಗಿಗೊಳಿಸಲಾಗಿತ್ತು. ಸಿನಿಮಾ ತಾರೆಯರ ಆಗಮನದಿಂದ ಅಭಿಮಾನಿಗಳು ಹಾಗೂ ಸ್ಥಳೀಯರಲ್ಲೂ ಕುತೂಹಲ ಹೆಚ್ಚಾಗಿತ್ತು. ರಾಜಕೀಯ ಮತ್ತು ಚಿತ್ರರಂಗದ ಗಣ್ಯರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಈ ವೈಭವದ ವಿವಾಹ ಸಾಮಾಜಿಕ ಜಾಲತಾಣಗಳಲ್ಲಿಯೂ ಭಾರೀ ಚರ್ಚೆಗೆ ಕಾರಣವಾಗಿದೆ. ಮೊಹಮ್ಮದ್ ನಲಪಾಡ್ ಅವರ ಎರಡನೇ ವಿವಾಹ ಮಡಿಕೇರಿಯಲ್ಲಿ ನೆರವೇರಿತು. ಡಿ.ಕೆ. ಶಿವಕುಮಾರ್, ಯಶ್ ಹಾಗೂ ಕಿಚ್ಚ ಸುದೀಪ್ ಸಮಾರಂಭದಲ್ಲಿ ಭಾಗವಹಿಸಿದರು.
