ಮಡಿಕೇರಿ, ಆಗಸ್ಟ್ 26: ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆ ಮುಂದುವರಿದಿದ್ದು, ಮಡಿಕೇರಿ ನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮಳೆ ಅವಾಂತರ ಸೃಷ್ಟಿಸಿದೆ. ಮಡಿಕೇರಿ ನಗರದ ಚಾಮುಂಡೇಶ್ವರಿ ನಗರದಲ್ಲಿ ಭಾರಿ ಮಳೆಯಿಂದಾಗಿ ಗುಡ್ಡದ ಮಣ್ಣು ರಸ್ತೆಗೆ ಕುಸಿದು ಬಿದ್ದಿದ್ದು, ಮಹಿಳೆಯೊಬ್ಬರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.
ಚಾಮುಂಡೇಶ್ವರಿ ನಗರ ಗುಡ್ಡ ಪ್ರದೇಶದಲ್ಲಿರುವುದರಿಂದ ಮಳೆಗಾಲದಲ್ಲಿ ಭೂಕುಸಿತದ ಆತಂಕ ಸಾಮಾನ್ಯವಾಗಿದೆ. ಹಲವು ವರ್ಷಗಳ ಹಿಂದೆ ಗುಡ್ಡವನ್ನು ಕಡಿದು ಮನೆಗಳನ್ನು ನಿರ್ಮಿಸಿರುವ ಈ ಪ್ರದೇಶದಲ್ಲಿ 2018 ಮತ್ತು 2019ರ ಪ್ರಾಕೃತಿಕ ವಿಕೋಪದ ಸಂದರ್ಭದಲ್ಲೂ ಭೂಕುಸಿತ ಸಂಭವಿಸಿ ಹಲವು ಮನೆಗಳು ಹಾನಿಗೊಳಗಾಗಿದ್ದವು. ಅನೇಕ ಕುಟುಂಬಗಳು ನಿರಾಶ್ರಿತರಾಗಿ ಸರ್ಕಾರದ ಪುನರ್ವಸತಿ ಸೌಲಭ್ಯ ಪಡೆದಿದ್ದರೆ, ಕೆಲವು ಕುಟುಂಬಗಳು ಈಗಲೂ ಇದೇ ಪ್ರದೇಶದಲ್ಲಿ ವಾಸಿಸುತ್ತಿವೆ.
ಸ್ಥಳೀಯರ ಪ್ರಕಾರ, ಗುಡ್ಡದ ಒಳಭಾಗದಲ್ಲಿ ಅಳವಡಿಸಲಾಗಿದ್ದ ನೀರಿನ ಪೈಪ್‌ವೊಂದು ಕೆಲ ದಿನಗಳ ಹಿಂದೆ ಒಡೆದು ಅಪಾರ ಪ್ರಮಾಣದ ನೀರು ಸೋರಿಕೆಯಾಗುತ್ತಿತ್ತು. ಈ ಬಗ್ಗೆ ನಗರಸಭೆ ಅಧಿಕಾರಿಗಳಿಗೆ ದೂರು ನೀಡಿದ್ದರೂ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದರ ಬೆನ್ನಲ್ಲೇ ನಿರಂತರವಾಗಿ ಭಾರಿ ಮಳೆ ಸುರಿದಿದ್ದು, ರಸ್ತೆ ಬದಿಯ ಮಣ್ಣು ಸಡಿಲಗೊಂಡು ಗುಡ್ಡ ಕುಸಿದಿದೆ ಎನ್ನಲಾಗಿದೆ.
ಗುಡ್ಡ ಕುಸಿತದಿಂದ ಸ್ಥಳೀಯ ನಿವಾಸಿ ಪುಂಡಲೀಕ ಅವರ ಸೌದೆ ಶೆಡ್ ಮಣ್ಣಿನೊಂದಿಗೆ ಕೊಚ್ಚಿಹೋಗಿದೆ. ಕಾರು ನಿಲುಗಡೆ ಪ್ರದೇಶವೂ ಮಣ್ಣಿನಿಂದ ಮುಚ್ಚಿಹೋಗಿದೆ. ಇದೇ ವೇಳೆ ಸ್ಥಳೀಯ ನಿವಾಸಿ ನೂರ್ ಜಹಾನ್ ಅವರು ಗುಡ್ಡ ಕುಸಿಯುವ ಕೆಲವೇ ಸೆಕೆಂಡ್‌ಗಳ ಮೊದಲು ಇದೇ ಮಾರ್ಗವಾಗಿ ತೆರಳಿದ್ದರು. ಅವರು ಮೇಲಿನ ರಸ್ತೆಯನ್ನು ತಲುಪಿದ ತಕ್ಷಣವೇ ಮಣ್ಣು ರಸ್ತೆಗೆ ಕುಸಿದು ಬಿದ್ದಿದೆ. ಸ್ವಲ್ಪ ತಡವಾಗಿದ್ದರೂ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಇನ್ನು ಮಡಿಕೇರಿಯ ಮಂಗಳಾದೇವಿ ನಗರದಲ್ಲೂ ಭಾರಿ ಮಳೆಯಿಂದಾಗಿ ರಸ್ತೆಗೆ ಅಪಾರ ಪ್ರಮಾಣದ ನೀರು ಹರಿದುಬಂದಿದೆ. ಇದರಿಂದ ವಾಹನ ಸಂಚಾರ ಹಾಗೂ ಸ್ಥಳೀಯರ ಓಡಾಟಕ್ಕೆ ತೊಂದರೆ ಉಂಟಾಗಿದೆ.
