ಸಚಿವ ಸ್ಥಾನದಿಂದ ರಾಜಣ್ಣ ಕಿಕ್‌ಔಟ್‌ ನಿರ್ಧಾರಕ್ಕೆ ಆ ವಿಡಿಯೋ ಕಾರಣನಾ..?

Web (6)

ಕಾಂಗ್ರೆಸ್‌ನ ಸಹಕಾರ ಸಚಿವ ಕೆಎನ್ ರಾಜಣ್ಣ ಅವರನ್ನು ಸಂಪುಟದಿಂದ ವಜಾಗೊಳಿಸಿರುವ ಕಾಂಗ್ರೆಸ್ ಹೈಕಮಾಂಡ್‌ನ ನಿರ್ಧಾರವು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ರಾಜಣ್ಣರ ವಜಾಕ್ಕೆ ಕಾರಣವಾಗಿರುವುದು ಮತ ಕಳವು ವಿವಾದದ ಬಗ್ಗೆ ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲ, ಬದಲಿಗೆ ಆಗಸ್ಟ್ 8, 2025ರಂದು ಒಂದು ಪ್ರತಿಭಟನಾ ವೇದಿಕೆಯಲ್ಲಿ ರಾಹುಲ್ ಗಾಂಧಿಯವರ ಬಗ್ಗೆ ಅವಾಚ್ಯ ಶಬ್ದಗಳನ್ನು ಬಳಸಿದ ವಿಡಿಯೋ ಎಂದು ಗ್ಯಾರಂಟಿ ನ್ಯೂಸ್‌ನ ಎಕ್ಸ್‌ಕ್ಲೂಸಿವ್ ಸುದ್ದಿಯಿಂದ ತಿಳಿದುಬಂದಿದೆ.

ವಿಡಿಯೋದಲ್ಲಿ ಏನಿತ್ತು?

ಆಗಸ್ಟ್ 8ರಂದು ತುಮಕೂರಿನ ಒಂದು ಪ್ರತಿಭಟನಾ ವೇದಿಕೆಯಲ್ಲಿ ರಾಜಣ್ಣ ಶಾಸಕರ ಜೊತೆ ಮಾತನಾಡುವಾಗ, ಕಾಂಗ್ರೆಸ್‌ನ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿಯವರನ್ನು ವ್ಯಂಗ್ಯವಾಗಿ ಟೀಕಿಸಿದ್ದರು. “ಈ ಪ್ರತಿಭಟನೆ ಯಾಕೆ ಬೇಕಿತ್ತು? ರಾಹುಲ್ ಗಾಂಧಿಗೆ ಕೆಲಸ ಇಲ್ವಾ?” ಎಂದು ರಾಜಣ್ಣ ಹೇಳಿರುವುದು ರೆಕಾರ್ಡ್‌ ಆಗಿತ್ತು. ಈ ವಿಡಿಯೋ ಶಾಸಕರ ಮೂಲಕ ರಾಹುಲ್ ಗಾಂಧಿಯವರಿಗೆ ತಲುಪಿತು. ವಿಡಿಯೋ ನೋಡಿದ ರಾಹುಲ್ ಕೆಂಡಕಾರಿದ್ದು, ಅದೇ ವೇದಿಕೆಯಲ್ಲೇ ರಾಜಣ್ಣರನ್ನು ಸಂಪುಟದಿಂದ ವಜಾಗೊಳಿಸುವ ನಿರ್ಧಾರವನ್ನು ಕೈಗೊಂಡಿದ್ದರು ಎಂದು ಮೂಲಗಳು ತಿಳಿಸಿವೆ.

ರಾಜಣ್ಣರ ವಿವಾದಾತ್ಮಕ ಹೇಳಿಕೆ

ರಾಜಣ್ಣರ ವಜಾಕ್ಕೆ ಮತ ಕಳವು ವಿವಾದಕ್ಕೆ ಸಂಬಂಧಿಸಿದ ಮಾಧ್ಯಮ ಹೇಳಿಕೆಯೇ ಕಾರಣವೆಂದು ಆರಂಭದಲ್ಲಿ ಭಾವಿಸಲಾಗಿತ್ತು. ರಾಜಣ್ಣ, 2024ರ ಚುನಾವಣೆಯ ಮತದಾರರ ಪಟ್ಟಿಯನ್ನು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ತಯಾರಿಸಲಾಗಿತ್ತು ಎಂದು ಹೇಳಿದ್ದರು. ಆದರೆ, ಈ ಹೇಳಿಕೆಗಿಂತಲೂ ಪ್ರತಿಭಟನಾ ವೇದಿಕೆಯಲ್ಲಿ ರಾಹುಲ್ ಗಾಂಧಿಯವರ ಬಗ್ಗೆ ಮಾಡಿದ ವ್ಯಂಗ್ಯಾತ್ಮಕ ಟೀಕೆಯೇ ಅವರ ವಜಾಕ್ಕೆ ಮುಖ್ಯ ಕಾರಣವಾಗಿದೆ ಎಂದು ಗ್ಯಾರಂಟಿ ನ್ಯೂಸ್‌ನನಿಂದ ತಿಳಿದುಬಂದಿದೆ.

ತುಮಕೂರಿನಲ್ಲಿ ಬೃಹತ್ ಪ್ರತಿಭಟನೆ

ರಾಜಣ್ಣರನ್ನು ಸಂಪುಟದಿಂದ ವಜಾಗೊಳಿಸಿರುವ ಕಾಂಗ್ರೆಸ್‌ನ ನಿರ್ಧಾರಕ್ಕೆ ತುಮಕೂರಿನಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಕುಣಿಗಲ್, ಮಧುಗಿರಿ, ಕೊರಟಗೆರೆ, ಗುಬ್ಬಿಯಿಂದ ರಾಜಣ್ಣರ ಬೆಂಬಲಿಗರು ತುಮಕೂರು ಜಿಲ್ಲಾ ಕೇಂದ್ರಕ್ಕೆ ಆಗಮಿಸಿ, ಟೌನ್‌ಹಾಲ್‌ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಜಾಥಾ ನಡೆಸಿದ್ದಾರೆ. “We Stand With KNR” ಎಂಬ ಫ್ಲೆಕ್ಸ್‌ಗಳೊಂದಿಗೆ ಸಾವಿರಾರು ಜನರು ಘೋಷಣೆ ಕೂಗಿದ್ದಾರೆ. ಮಂಗಳವಾರ ಮಧುಗಿರಿಯಲ್ಲಿ ಒಬ್ಬ ಬೆಂಬಲಿಗ ಆತ್ಮಹತ್ಯೆಗೆ ಯತ್ನಿಸಿದ ಘಟನೆಯಿಂದಾಗಿ, ಪೊಲೀಸರು ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದಾರೆ.

ಕಾಂಗ್ರೆಸ್‌ನ ಒಳಗಿನ ಕಲಹ

ರಾಜಣ್ಣರ ವಜಾಕ್ಕೆ ಕಾಂಗ್ರೆಸ್‌ನ ಹೈಕಮಾಂಡ್‌ನ ನಿರ್ಧಾರವೇ ಕಾರಣ ಎಂದು ಕೆಲವು ನಾಯಕರು ಹೇಳಿದ್ದಾರೆ. ಆದರೆ, ಈ ಘಟನೆಯು ಕಾಂಗ್ರೆಸ್‌ನ ಒಳಗಿನ ಕಲಹವನ್ನು ಮತ್ತಷ್ಟು ತೆರೆದಿಟ್ಟಿದೆ. ಶನಿವಾರದಂದೇ ಸಿಎಂ ಸಿದ್ದರಾಮಯ್ಯಗೆ ಹೈಕಮಾಂಡ್‌ನಿಂದ ಮಾಹಿತಿ ತಿಳಿಸಲಾಗಿತ್ತು, ಆದರೆ ಸೋಮವಾರ ರಾಜಣ್ಣರ ವಜಾದ ಸುದ್ದಿ ಅವರಿಗೂ ಆಘಾತವನ್ನುಂಟುಮಾಡಿತು. ಅಹಿಂದ ಸಮುದಾಯದ ನಾಯಕರು ರಾಜಣ್ಣರ ಬೆಂಬಲಕ್ಕೆ ನಿಂತಿದ್ದು, ಯಾದಗಿರಿಯ ರಾಜನಹಳ್ಳಿಯ ಗುರು ಪೀಠದ ಪ್ರಸನ್ನಾನಂದ ಶ್ರೀಗಳು ಈ ವಜಾದ ಹಿಂದೆ ಷಡ್ಯಂತ್ರವಿದೆ ಎಂದು ಆರೋಪಿಸಿದ್ದಾರೆ.

 

Exit mobile version