ಸ್ಮಾರ್ಟ್ ಮೀಟರ್ ಹಗರಣ: ಸಚಿವ ಜಾರ್ಜ್‌ಗೆ ಹೈಕೋರ್ಟ್‌ನಿಂದ ತಾತ್ಕಾಲಿಕ ರಿಲೀಫ್!

₹16,000 ಕೋಟಿ ಆರೋಪ: ಸಚಿವ ಜಾರ್ಜ್‌ಗೆ ಲೋಕಾಯುಕ್ತ ತನಿಖೆಗೆ ತಡೆ!

Untitled design (58)

ಬೆಂಗಳೂರು: ₹16,000 ಕೋಟಿ ಮೌಲ್ಯದ ಸ್ಮಾರ್ಟ್ ಮೀಟರ್ ಟೆಂಡರ್‌ನಲ್ಲಿ ಅಕ್ರಮ ಆರೋಪದಡಿ ತನಿಖೆ ಎದುರಿಸುತ್ತಿರುವ ಇಂಧನ ಸಚಿವ ಕೆ.ಜೆ. ಜಾರ್ಜ್‌ಗೆ ಕರ್ನಾಟಕ ಹೈಕೋರ್ಟ್‌ನಿಂದ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಲೋಕಾಯುಕ್ತ ಪೊಲೀಸರಿಗೆ ತನಿಖಾ ವರದಿ ಸಲ್ಲಿಸಲು ಆದೇಶಿಸಿದ್ದನ್ನು ಪ್ರಶ್ನಿಸಿ ಜಾರ್ಜ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯಲ್ಲಿ, ಹೈಕೋರ್ಟ್ ಈ ಆದೇಶಕ್ಕೆ ಎರಡು ವಾರಗಳ ಕಾಲ ತಡೆ ನೀಡಿದೆ.

ಪ್ರಕರಣದ ಹಿನ್ನೆಲೆ:

ಸ್ಮಾರ್ಟ್ ಮೀಟರ್ ಟೆಂಡರ್‌ಗೆ ಸಂಬಂಧಿಸಿದ ₹16,000 ಕೋಟಿ ಅಕ್ರಮ ಆರೋಪದಲ್ಲಿ ಬಿಜೆಪಿ ನಾಯಕರಾದ ಸಿ.ಎನ್. ಅಶ್ವತ್ಥ್ ನಾರಾಯಣ್, ಎಸ್.ಆರ್. ವಿಶ್ವನಾಥ್, ಮತ್ತು ಧೀರಜ್ ಮುನಿರಾಜು ದೂರುದಾರರಾಗಿ ಲೋಕಾಯುಕ್ತದಲ್ಲಿ ದಾಖಲಿಸಿದ ದೂರಿನ ಮೇರೆಗೆ ತನಿಖೆ ಆರಂಭವಾಗಿತ್ತು. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಲೋಕಾಯುಕ್ತ ಎಸ್‌ಪಿಗೆ ತನಿಖಾ ವರದಿ ಸಲ್ಲಿಸಲು ಸೂಚಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಮಾಡಿ ಸಚಿವ ಜಾರ್ಜ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಹೈಕೋರ್ಟ್‌ನ ಜಸ್ಟೀಸ್ ಎಂ.ಐ. ಅರುಣ್ ಅವರ ಏಕಸದಸ್ಯ ಪೀಠವು ಅರ್ಜಿಯ ವಿಚಾರಣೆ ನಡೆಸಿ, ಲೋಕಾಯುಕ್ತ ಎಸ್‌ಪಿ ಹಾಗೂ ದೂರುದಾರರಿಗೆ ನೋಟಿಸ್ ಜಾರಿಗೊಳಿಸಿದೆ. ಜೊತೆಗೆ, ವಿಶೇಷ ನ್ಯಾಯಾಲಯದ ಆದೇಶಕ್ಕೆ ತಾತ್ಕಾಲಿಕ ತಡೆ ನೀಡಿ, ವಿಚಾರಣೆಯನ್ನು ಎರಡು ವಾರಗಳಿಗೆ ಮುಂದೂಡಿದೆ.

ಕೋರ್ಟ್‌ನಲ್ಲಿ ವಾದ-ಪ್ರತಿವಾದ:

ಜಾರ್ಜ್‌ರ ಪರ ವಕೀಲರ ವಾದ:

ಸಚಿವ ಜಾರ್ಜ್‌ರ ಪರವಾಗಿ ವಾದಿಸಿದ ಹಿರಿಯ ವಕೀಲ ಸಿ.ವಿ. ನಾಗೇಶ್, “ಸಾರ್ವಜನಿಕ ಸೇವಕರಿಗಿಂತ ಕೆಳ ಶ್ರೇಣಿಯಲ್ಲಿರುವ ಪೊಲೀಸ್ ಅಧಿಕಾರಿಗಳಿಗೆ ತನಿಖಾ ವರದಿ ಸಲ್ಲಿಸಲು ಸೂಚಿಸುವುದು ಕಾನೂನಿನ ವ್ಯಾಪ್ತಿಯನ್ನು ಮೀರುತ್ತದೆ. ಇದು ನ್ಯಾಯಾಲಯದ ಅಧಿಕಾರಕ್ಕೆ ವಿರುದ್ಧವಾಗಿದೆ,” ಎಂದು ವಾದಿಸಿದರು. ಇದಲ್ಲದೆ, “ನಾವು ಪ್ರಕರಣದ ತಾಂತ್ರಿಕ ಅಂಶಗಳ ಮೇಲೆ ವಾದಿಸುತ್ತಿದ್ದೇವೆ, ಮೆರಿಟ್‌ನ ಮೇಲೆ ಅಲ್ಲ,” ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ನಾಯಕರ ಪರ ವಕೀಲರ ವಾದ

ದೂರುದಾರರಾದ ಬಿಜೆಪಿ ನಾಯಕರ ಪರವಾಗಿ ವಾದಿಸಿದ ಹಿರಿಯ ವಕೀಲೆ ಲಕ್ಷ್ಮೀ ಅಯ್ಯಂಗಾರ್, “ಪ್ರಕರಣವು ತನಿಖೆಯ ಪ್ರಾಥಮಿಕ ಹಂತದಲ್ಲಿದೆ. ಲೋಕಾಯುಕ್ತ ಎಸ್‌ಪಿಯ ವರದಿಯಿಂದ ನ್ಯಾಯಾಲಯ ತೃಪ್ತಿಗೊಂಡರೆ, ಹಿರಿಯ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ ನೀಡಬಹುದು. ಈ ಹಂತದಲ್ಲಿ ಮಧ್ಯಂತರ ಆದೇಶದ ಅಗತ್ಯವಿಲ್ಲ,” ಎಂದು ವಾದ ಮಂಡಿಸಿದರು.

ವಿಚಾರಣೆಯ ಸಂದರ್ಭದಲ್ಲಿ, ಜಸ್ಟೀಸ್ ಎಂ.ಐ. ಅರುಣ್ ಅವರು, “ಒಂದು ರಾಜಕೀಯ ಪಕ್ಷವು ಇನ್ನೊಂದು ಪಕ್ಷದ ವಿರುದ್ಧ ದೂರು ದಾಖಲಿಸುವ ಸಂಪ್ರದಾಯ ತಮಿಳುನಾಡಿನಿಂದ ಇಲ್ಲಿಗೂ ಬಂದಿದೆ. ಇಂತಹ ರಾಜಕೀಯ ಕೇಸ್‌ಗಳ ಸಂಪ್ರದಾಯವು ಈಗ ಕರ್ನಾಟಕದಲ್ಲೂ ಆರಂಭವಾಗಿದೆ,” ಎಂದು ಟೀಕಾತ್ಮಕವಾಗಿ ಅಭಿಪ್ರಾಯ ವ್ಯಕ್ತಪಡಿಸಿದರು.

ತಾತ್ಕಾಲಿಕ ರಿಲೀಫ್:

ಲೋಕಾಯುಕ್ತ ಪೊಲೀಸರಿಗೆ ವರದಿ ಸಲ್ಲಿಸಲು ನೀಡಿದ್ದ ಆದೇಶಕ್ಕೆ ತಡೆ ನೀಡಿರುವ ಹೈಕೋರ್ಟ್, ಸಚಿವ ಕೆ.ಜೆ. ಜಾರ್ಜ್‌ಗೆ ತಾತ್ಕಾಲಿಕ ರಿಲೀಫ್ ನೀಡಿದೆ. ಈ ಆದೇಶವು ಪ್ರಕರಣದ ಮುಂದಿನ ವಿಚಾರಣೆಯವರೆಗೆ ಜಾರಿಯಲ್ಲಿರಲಿದೆ, ಮತ್ತು ಎರಡು ವಾರಗಳ ನಂತರ ಮುಂದಿನ ವಿಚಾರಣೆ ನಡೆಯಲಿದೆ.

Exit mobile version