ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯ ಆರ್ಭಟ ಮುಂದುವರೆದಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಆಗಸ್ಟ್ 30ರಂದು ಶಾಲೆಗಳು ಮತ್ತು ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಸೆಪ್ಟೆಂಬರ್ ಮೊದಲ ವಾರದವರೆಗೂ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಭಾರೀ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ ಮುನ್ಸೂಚನೆ ನೀಡಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಜೆ:
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯ ಪ್ರಮಾಣ ತೀವ್ರವಾಗಿರುವ ಕಾರಣ, ಆಗಸ್ಟ್ 30 ರಂದು ಜಿಲ್ಲೆಯ ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಅಂಗನವಾಡಿಯಿಂದ ಪ್ರೌಢಶಾಲೆಗಳವರೆಗೆ ರಜೆಯನ್ನು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಆದೇಶಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ರಜೆ:
ಚಿಕ್ಕಮಗಳೂರು ಜಿಲ್ಲೆಯ ಕಳಸ, ಮೂಡಿಗೆರೆ, ಶೃಂಗೇರಿ, ಕೊಪ್ಪ, ಮತ್ತು ಎನ್.ಆರ್.ಪುರ ತಾಲೂಕುಗಳ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಆಗಸ್ಟ್ 30 ರಂದು ರಜೆ ಘೋಷಿಸಲಾಗಿದೆ. ಇದರ ಜೊತೆಗೆ, ಚಿಕ್ಕಮಗಳೂರು ತಾಲೂಕಿನ ಜಾಗರ, ಖಾಂಡ್ಯ, ಆಲ್ದೂರು, ಕಸಬಾ, ಅಂಬಳೆ, ವಸ್ತಾರೆ, ಆವತಿ ಹೋಬಳಿಗಳು ಮತ್ತು ತರೀಕೆರೆ ತಾಲೂಕಿನ ಲಕ್ಕವಳ್ಳಿ ಹಾಗೂ ಲಿಂಗದಹಳ್ಳಿ ಹೋಬಳಿಗಳ ಅಂಗನವಾಡಿ, ಪ್ರಾಥಮಿಕ, ಮತ್ತು ಪ್ರೌಢ ಶಾಲೆಗಳಿಗೂ ರಜೆ ನೀಡಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ ಹೊರಡಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ರಜೆ:
ಉತ್ತರ ಕನ್ನಡ ಜಿಲ್ಲೆಯಲ್ಲಿ ಸತತ ಮಳೆಯಿಂದಾಗಿ ಶಾಲಾ ವಿದ್ಯಾರ್ಥಿಗಳಿಗೆ ಆಗಸ್ಟ್ 30 ರಂದು ರಜೆ ಘೋಷಿಸಲಾಗಿದೆ. ವಿಶೇಷವಾಗಿ ಹೊನ್ನಾವರ ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ತಹಶೀಲ್ದಾರ್ ರಜೆ ಆದೇಶ ಹೊರಡಿಸಿದ್ದಾರೆ. ಈ ವಾರದಲ್ಲಿ ಈಗಾಗಲೇ ಹಲವು ದಿನ ರಜೆ ಘೋಷಿಸಲಾಗಿತ್ತು, ಆದರೆ ಶನಿವಾರದಂದು ಭಾರೀ ಮಳೆಯ ಮುನ್ಸೂಚನೆಯಿಂದ ಮತ್ತೆ ರಜೆ ನೀಡಲಾಗಿದೆ.
ಕರಾವಳಿ ಜಿಲ್ಲೆಗಳಲ್ಲಿ ಮಳೆಯ ತೀವ್ರತೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಗಣೇಶ ಚತುರ್ಥಿ ಹಬ್ಬವನ್ನು ಮಳೆಯ ನಡುವೆಯೇ ಅದ್ದೂರಿಯಾಗಿ ಆಚರಿಸಲಾಗಿದೆ. ಶುಕ್ರವಾರದಂದು ಮಳೆಯ ಪ್ರಮಾಣ ಸ್ವಲ್ಟ ಕಡಿಮೆಯಾಗಿದ್ದರಿಂದ ಶಾಲೆಗಳು ಕಾರ್ಯನಿರ್ವಹಿಸಿದ್ದವು, ಆದರೆ ಶನಿವಾರದಂದು ಭಾರೀ ಮಳೆಯ ಸಾಧ್ಯತೆಯಿಂದ ಮುಂಜಾಗ್ರತೆಯಾಗಿ ರಜೆ ಘೋಷಿಸಲಾಗಿದೆ.
ಆಗಸ್ಟ್ 31 ರಿಂದ ಸೆಪ್ಟೆಂಬರ್ 3 ರವರೆಗೆ ದಕ್ಷಿಣ ಕನ್ನಡ, ಉತ್ತರ ಕನ್ನಡ, ಮತ್ತು ಉಡುಪಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಜನರು ಎಚ್ಚರಿಕೆಯಿಂದ ಇರಲು ಮತ್ತು ಸುರಕ್ಷಿತ ಸ್ಥಳಗಳಲ್ಲಿ ಉಳಿಯಲು ಸೂಚಿಸಲಾಗಿದೆ.