ಗಿಗ್ ಕಾರ್ಮಿಕರ ಕಲ್ಯಾಣಕ್ಕೆ ಸಚಿವ ಸಂತೋಷ್ ಲಾಡ್ ಪಣ

123 (70)

ಧಾರವಾಡ: ಗಿಗ್‌ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರವಹಿಸುವ ಕಾರ್ಮಿಕರ ಆರೋಗ್ಯವನ್ನು ಗಮನದಲ್ಲಿ ಇಟ್ಟುಕೊಂಡು ಅಗ್ರಿಗೇಟರ್‌ ಸಂಸ್ಥೆಗಳಿಂದ ಸುಂಕ ಸಂಗ್ರಹವನ್ನು ಮಾಡಲಾಗುವುದು ಎಂದು ಕಾರ್ಮಿಕ ಖಾತೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್‌ ಅವರು ಹೇಳಿದರು.

ಧಾರವಾಡದಲ್ಲಿ ವಾರ್ತಾ ಇಲಾಖೆಯ ಗಾಂಧಿ ಭವನ ಉದ್ಘಾಟನಾ ಸಮಾರಂಭದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶೇ 5 ರಷ್ಟು ಸುಂಕ ಸಂಗ್ರಹಿಸಲಾಗುವುದು ಎಂಬ ವರದಿಗಳಿಗೆ ಆಕ್ಷೇಪ ವ್ಯಕ್ತವಾಗಿರುವುದರ ಬಗ್ಗೆ ಪ್ರತಿಕ್ರಿಯಿಸಿದರು.

ADVERTISEMENT
ADVERTISEMENT

ಗಿಗ್‌ ಕಾರ್ಮಿಕರು ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಕೆಲಸ ಮಾಡುತ್ತಾರೆ. ಅವರು ಸಾಮಾನ್ಯವಾಗಿ ಸೈಕಲ್‌ ಹಾಗೂ ಮೋಟಾರ್‌ ಬೈಕ್‌ಗಳಲ್ಲಿ ಡೆಲಿವರಿ ಕೆಲಸ ಮಾಡುತ್ತಾರೆ. ಹೀಗೆ ಅವರು ರಸ್ತೆಯಲ್ಲಿ ಸಾಗುವಾಗ ಅವರು ಸೇವಿಸುವ ಇಂಗಾಲದ ಪ್ರಮಾಣವೂ ಅಧಿಕವಾಗಿರುತ್ತದೆ. ತಮ್ಮ ಆರೋಗ್ಯವನ್ನೂ ಲೆಕ್ಕಿಸದೇ ಕುಟುಂಬಕ್ಕಾಗಿ ಅವರು ದುಡಿಯುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಸೆಸ್‌ ಸಂಗ್ರಹ ಮಾಡಲಾಗುವುದು ಎಂದು ಸಚಿವ ಸಂತೋಷ್‌ ಲಾಡ್‌ ಅವರು ವಿವರಿಸಿದರು.

ಒಬ್ಬ ಗಿಗ್‌ ಕಾರ್ಮಿಕ ಸರಾಸರಿ ಇಪ್ಪತ್ತು ವರ್ಷ ಕೆಲಸ ಅವನು ಸೇವಿಸುವ ಕಾರ್ಬನ್‌ ಡೈ ಆಕ್ಸೆಡ್‌ ಪ್ರಮಾಣವೂ ಸಾಕಷ್ಟು ಇರುತ್ತದೆ.  ಅವರ ಯೋಗಕ್ಷೇಮ ಸಹ ಮುಖ್ಯ. ಇಲ್ಲಿ ಬಹುರಾಷ್ಟ್ರೀಯ ಕಂಪನಿಗಳಿಗೆ ಲಾಭ ಅಥವಾ ನಷ್ಟ ಮಾಡುವ ವಿಚಾರ ಮುಖ್ಯವಲ್ಲ. ಗಿಗ್‌ ಕಾರ್ಮಿಕರ ಕ್ಷೇಮಾಭಿವೃದ್ಧಿ ಇಲಾಖೆಗೆ ಮುಖ್ಯ. ಅವರ ಕುಟುಂಬ ಮುಖ್ಯ. ಈ ನಿಟ್ಟಿನಲ್ಲಿ ನಾವು ಸೆಸ್‌ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.

ಎಲ್ಲಾ ಅಗ್ರಿಗೇಟರ್‌ ಕಂಪನಿಗಳಿಗೆ ಸಾರಾಸಗಟಾಗಿ ಶೇ ಐದರಷ್ಟು ಸೆಸ್‌ ವಿಧಿಸುವುದಿಲ್ಲ. ಇದನ್ನು ಅವಸರದಲ್ಲಿ ಅಂತಿಮಗೊಳಿಸುವುದಿಲ್ಲ. ಗಿಗ್‌ ಮಂಡಳಿ ರಚನೆಗೆ ಸಂಪುಟ ಅನುಮೋದನೆ ನೀಡಿದೆ. ಮುಂದೆ ಮಂಡಳಿ ರಚನೆಯಾಗಲಿದೆ. ನಿಯಮ ರಚನೆ ಮಾಡುವಾಗ ಸಂಬಂಧಿಸಿದ ಎಲ್ಲರ ಅಭಿಪ್ರಾಯ ಪಡೆಯುತ್ತೇವೆ. ಆಸಕ್ತರನ್ನು ಸೇರಿಸಿ ಚರ್ಚೆ ಮಾಡುತ್ತೇವೆ. ಅವರ ಅಭಿಪ್ರಾಯಕ್ಕೆ ಮನ್ನಣೆ ನೀಡುತ್ತೇವೆ. ಶೇ 5 ರಷ್ಟು ಸೆಸ್‌ ಯಾರಿಗೆ ಸಂಗ್ರಹಿಸಬೇಕು. ಶೇ 5ರ ಒಳಗೆ ಯಾರಿಗೆ ಸಂಗ್ರಹ ಮಾಡಬೇಕು ಎಂದು ಮುಂದೆ ತೀರ್ಮಾನ ಮಾಡುತ್ತೇವೆ. ಅಂತಿಮಗಾಗಿ ಒಂದು ನಿರ್ಣಯ ಕೈಗೊಳ್ಳುತ್ತೇವೆ ಎಂದು ಸಚಿವ ಸಂತೋಷ್‌ ಲಾಡ್‌ ಹೇಳಿದರು.

ಇಂತಹ ಮಹತ್ವ ಪ್ರಯತ್ನದ ಹಿಂದೆ ನಮ್ಮ ಪಕ್ಷದ ಮುಖಂಡರಾದ ರಾಹುಲ್‌ ಗಾಂಧಿ ಅವರ ಶ್ರಮ ಇವೆ. ಗಿಗ್‌ ಕಾರ್ಮಿಕರ ಬಗ್ಗೆ ಅವರಿಗೆ ಅಪಾರವಾಗಿ ಕಾಳಜಿ ಇದೆ. ಭಾರತ್‌ ಜೋಡೊ ಯಾತ್ರೆ ವೇಳೆ ರಾಹುಲ್‌ ಗಾಂಧಿ ಅವರು ಇದರ ಬಗ್ಗೆ ಆಸಕ್ತಿ ತೋರಿದ್ದರು. ರಾಜಸ್ಥಾನದಲ್ಲಿ ಇದರ ಬಗ್ಗೆ ಮಸೂದೆ ಬಂದಿದೆ. ಇಡೀ ದೇಶದಲ್ಲೇ ಒಂದು ಅತ್ಯುತ್ತಮ ಮಸೂದೆಯನ್ನು ನಮ್ಮ ರಾಜ್ಯ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದರು.

ನಾನು ಈಗಾಗಲೇ ಸುಮಾರು ಇಪ್ಪತ್ತು ಸಭೆಗಳನ್ನು ಮಾಡಿದ್ದೇನೆ. ಒಂದು ವರ್ಷ ಕಾಲಾವಕಾಶ ತೆಗೆದುಕೊಂಡಿದ್ದೇವೆ. ಯಾವುದನ್ನೂ ಅವಸರದಲ್ಲಿ ಮಾಡಿಲ್ಲ. ನಮ್ಮ ಗಿಗ್‌ ಮಸೂದೆಯನ್ನು ಮಾದರಿಯಾಗಿಟ್ಟುಕೊಂಡು ಬೇರೆ ಬೇರೆ ರಾಜ್ಯಗಳಲ್ಲೂ ಬರಲಿದೆ. ಇದು ನಮ್ಮ ಹೆಮ್ಮೆ ಎಂದು ಸಚಿವ ಸಂತೋಷ್‌ ಲಾಡ್‌ ಹೇಳಿದರು.

 

Exit mobile version