ಸೋಶಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್‌ ಮಾಡಿ ಕಿರುಕುಳ: ಡ್ಯಾಂಗೆ ಜಿಗಿದು ಯುವತಿ ಆತ್ಮಹತ್ಯೆ!

111 (5)

ಕಲಬುರಗಿ: ಯುವಕನೊಬ್ಬನ ಕಿರುಕುಳಕ್ಕೆ ಬೇಸತ್ತ ಯುವತಿಯೊಬ್ಬಳು ಬೆಣ್ಣೇತೋರಾ ಡ್ಯಾಂನ ಹಿನ್ನೀರಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಮಲಾಪುರ ತಾಲೂಕಿನ ಕುರಿಕೋಟ ಗ್ರಾಮದ ಬಳಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ಭೂಸಣಗಿ ಗ್ರಾಮದ ಸಾಕ್ಷಿ ಉಪ್ಪಾರ್ (22) ಎಂದು ಗುರುತಿಸಲಾಗಿದೆ. ಅಭಿಷೇಕ್ ಎಂಬ ಯುವಕನ ವಿರುದ್ಧ ಕಿರುಕುಳದ ಆರೋಪ ಕೇಳಿಬಂದಿದೆ. ಆತ ಯುವತಿಯ ಜೊತೆಗಿರುವ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದ ಎನ್ನಲಾಗಿದೆ. ಈ ಕಿರುಕುಳದಿಂದ ಮಾನಸಿಕವಾಗಿ ಕುಗ್ಗಿದ ಸಾಕ್ಷಿ, ಬೆಣ್ಣೇತೋರಾ ಡ್ಯಾಂಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತನಿಖೆಯಿಂದ ತಿಳಿದುಬಂದಿದೆ.

ಸಾಕ್ಷಿಯ ಮೃತದೇಹವನ್ನು ಹುಡುಕಲು ಅಗ್ನಿಶಾಮಕ ದಳದ ಸಿಬ್ಬಂದಿ ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ಘಟನೆ ಮಹಾಗಾಂವ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಸಾಮಾಜಿಕ ಜಾಲತಾಣಗಳ ದುರುಪಯೋಗವು ಯುವ ಜನರ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಈ ಘಟನೆಯು ಫೋಟೊಗಳನ್ನು ಅನೈತಿಕವಾಗಿ ವೈರಲ್ ಮಾಡುವುದರಿಂದ ಉಂಟಾಗುವ ಗಂಭೀರ ಪರಿಣಾಮಗಳ ಬಗ್ಗೆ ಎಚ್ಚರಿಕೆಯ ಸಂದೇಶವನ್ನು ನೀಡಿದೆ. ಪೊಲೀಸರು ಈ ಪ್ರಕರಣದಲ್ಲಿ ಆರೋಪಿಯ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.

Exit mobile version